Monday, September 18, 2006

ಅಕ್ಕ ಏನೇ ಸಡಗರ(ಒಂದು ಕವನ)

ಆಗಸದಿ ಚಂದಿರನ ತೋರಿಸುತ
ನಮ್ಮಮ್ಮ ನೀಡಿದ ಎದೆಯ ಹಾಲು
ಅಳುತಿದ್ದ ಮಕ್ಕಳಿಗೆ ಮುತ್ತನಿತ್ತಳು ಅಮ್ಮ
ತೋರಿಸುತ ತಾರೆಗಳ ಸಾಲು

ಅಕ್ಕ ಹೇಳೇ ನೀನು ಎಲ್ಲಿತ್ತು
ನಿನಗೆ ತೊದಿಸಲು ಚಿನ್ನ ಮುತ್ತು
ನೆನಪಿದೆಯ ನಿನಗೆ ಅಮ್ಮ ನೀಡಿದ
ಅಕ್ಕರೆಯ ಕೈಯ ತುತ್ತು

ಯಾವ ಮೋಹನ ಮುರಳಿ ನಾದಕೆ
ಮರುಳಾಗಿ ಹಾರಿದೆ ದೂರಕೆ
ಅಮ್ಮ ಮರೆತಳು ಎಲ್ಲ ನೋವನು
ಮಗಳ ಸುಖದ ಕನಸಿಗೆ

ಕನಸು ನನಸಾಗಿಹುದು,ನೀನು ಹಾಯಾಗಿರುವೆ
ಅಮ್ಮನಾ ನೆಮ್ಮದಿಗೆ ಇದು ಕಾರಣ
ಐವತ್ತು ತುಂಬಿದಾ ಅಮ್ಮನಾ ಸಂಭ್ರಮಕೆ
ನಗುತಿಹಿದು ಬಾಗಿಲಲಿ ಎಲೆ ತೋರಣ

ಮಣ್ಣಿನಾ ವಾಸನೆಯ ಮರೆತಿಲ್ಲ ನೀನು
ಮಡಿಲಕ್ಕಿ ನೀಡಿದಾ ನಿನ್ನ ತವರ
ಚಂದಿರನ ನೋಡುತ್ತ ಅಮ್ಮನನು ಕಾಣುತ್ತ
ಅಕ್ಕ ಹೇಳೇ ನಿನಗೆ ಎಷ್ಟು ಸಡಗರ

(ಈ ತಿಂಗಳಲ್ಲಿ ಅಮೆರಿಕಾದ ಬಾಲ್ಟಿಮೋರ್‍ನಲ್ಲಿ ನಡೆದ ಕನ್ನಡ ಸಮ್ಮೇಳನದ ಸಂದರ್ಭದ ನೆನಪಿಗೆ)
ಸೂರ್ಯಪ್ರಕಾಶ್ ಹುಳಿಯಾರು

1 comment:

bhadra said...

ಮನ ಮುಟ್ಟುವಂತಹ ಕವನ. ಸೂಪರ್ ಸೂರ್ಯಪ್ರಕಾಶ್ ಸರ್.

ನಿಮ್ಮ ಹಳೆಯ ಕವನಗಳನ್ನು ಇಲ್ಲಿಯೇ ಹಾಕಿರಿ. ಬಹಳ ಒಳ್ಳೆಯ ಬ್ಲಾಗ್.