Monday, August 28, 2006

ಗೊಣಗಾಟದ ಬಗ್ಗೆ ಒಂದು ಹುಡುಕಾಟ(ಲಲಿತ ಪ್ರಬಂಧ)

ಓಂ

ನನ್ನ ಮಗ ಕೃಷ್ಣಪ್ರಸಾದ್ ಒಂದು ದಿನ ಮೈಲ್ ಮಾಡಿ ಡಾ.ರಾಜ್‍ಕುಮಾರ್ ಬಗ್ಗೆ ಒಂದು ಲೇಖನ ಬರೆದಿದ್ದೇನೆಂದು ತಿಳಿಸಿ ಅವನ ಸ್ವಂತ ಬ್ಲಾಗನ್ನು ತೆರೆದು ಓದಲು ಹೇಳಿದ. ನಿಜವಾಗಲೂ ಅವನು ಬರೆದ ಲೇಖನ ಉತ್ತಮವಾಗಿತ್ತು.ಅನುಭವಿ ಲೇಖಕನಂತೆ ಸರಾಗವಾಗಿ ತನ್ನ ಅನುಭವವನ್ನು ಆ ಲೇಖನದಲ್ಲಿ ತಿಳಿಸಿದ್ದ.ನನಗಂತೂ ತುಂಬಾ ಸಂತೋಷವಾಯಿತು.ನನ್ನ ಸಂತೋಷವನ್ನು ಅವನಿಗೂ ತಿಳಿಸಿ ಇದೇ ರೀತಿ ಲೇಖನಗಳನ್ನು ಬರೆಯುವುದನ್ನು ಮುಂದುವರಿಸಬೇಕೆಂದು ತಿಳಿಸಿದೆ.
ನಂತರ ಗಮನಿಸಿದೆ.ಅವನ ಬ್ಲಾಗ್‍ನ ಹೆಸರು "ಗೊಣಗಾಟ" ಎಂದಿತ್ತು.ಇದೇನಪ್ಪ.ಒಳ್ಳೆಯ ಲೇಖನವನ್ನು ಬರೆದವನು ತನ್ನ ಬ್ಲಾಗ್‍ಗೆ ಇಂಥ ಹೆಸರು ನೀಡಿದ್ದಾನಲ್ಲ ಎಂದು ಮನದಲ್ಲೇ ಗೊಣಗಿಕೊಂಡೆ.ಅಲ್ಲದೆ ಈ ವಿಷಯವನ್ನು ನನ್ನ ಹೆಂಡತಿಗೂ ತಿಳಿಸಿದೆ.ಅವಳಂತೂ ನನಗಿಂತ ಪುರಾತನ ಮನಃಸ್ಠಿತಿಯವಳು.ತನ್ನ ಪಾಡಿಗೆ ತಾನು ಓದುವುದನ್ನು ಬಿಟ್ಟು ಅವನಿಗೆ ಇವೆಲ್ಲಾ ಏಕೆ ಎಂದು ಗೊಣಗಿಕೊಂಡಳು.
ಈ ವಿಷಯದ ಬಗ್ಗೆಯೇ ಯೋಚನೆ ಮಾಡುತ್ತಿದ್ದಾಗ ಗೊಣಗಾಟದ ಬಗ್ಗೆ ಹಲವು ವಿಶೇಷಗಳು ಗೋಚರವಾಗತೊಡಗಿದವು.ಗೊಣಗಾಟ ಭಾರತೀಯರೆಲ್ಲರಿಗೂ ಪರಂಪರಾಗತವಾಗಿ ಬಂದಿರುವ ಒಂದು ಗುಣ ಎಂದು ತಿಳಿಯಿತು.ಚಿಕ್ಕ ಮಕ್ಕಳಿಂದ ಮುದುಕರವರೆಗೂ ಒಂದು ಬಿಡಲಾಗದ ಹವ್ಯಾಸವಾಗಿರುವುದನ್ನು ಗಮನಿಸಬಹುದು.
ಬಹುಷಃ ತಮ್ಮ ಅಸಹಾಯಕತೆಯನ್ನು,ಅಸಮಾಧಾನವನ್ನು ಮೆದುವಾದ ರೀತಿಯಲ್ಲಿ ಪ್ರತಿಭಟನೆಯ ಮೂಲಕ ದಾಖಲಿಸುವುದೇ ಗೊಣಗಾಟವೆಂದು ಹೇಳಬಹುದೇನೋ.ಈ ರೀತಿಯ ಪ್ರತಿಭಟನೆಯಿಂದ ಯಾವುದೇ ಪ್ರಯೋಜನವಿಲ್ಲವೆಂದು ಗೊಣಗುವವರಿಗೆ ಗೊತ್ತೇ ಇರುತ್ತದೆ.ಹೇಗಾದರೂ ಸರಿ ತಮ್ಮ ಅಸಮಾಧಾನವನ್ನು ಸಂಬಂಧಿಸಿದವರಿಗೆ ಮುಟ್ಟಿಸುವುದೇ ಗೊಣಗಾಟದ ಉದ್ದಿಶ್ಯವೆನ್ನಬಹುದು.
ಉದಾಹರಣೆಗೆ ಬೆಳಿಗ್ಗೆ ಸುಖನಿದ್ರೆಯಲ್ಲಿರುವ ಮಕ್ಕಳನ್ನು ತಾಯಿ ಏಳಿಸುತ್ತಾಳೆ.ಆದರೆ ಅವಕ್ಕೆ ಆ ಸಮಯದಲ್ಲಿ ಏಳಲು ಮನಸ್ಸಿರುವುದಿಲ್ಲ.ಹಾಗೇ ಮಲಗಿಕೊಳ್ಳುತ್ತವೆ.ತಾಯಿ ಬಲವಂತ ಮಾಡಿದಾಗ ವಿಧಿಯಿಲ್ಲದೆ ಗೊಣಗಿಕೊಂಡೇ ಏಳುತ್ತಾರೆ.ಇಲ್ಲಿ ತಾಯಿಯ ಬಗ್ಗೆ ಅಸಮಾಧಾನವನ್ನು ತೋರಿಸುವುದಷ್ಟೇ ಅವರ ಉದ್ದೇಶ್ಯ.
ಮನೆಯಲ್ಲಿ ಕೆಲಸವಿಲ್ಲದೇ ಇರುವ ವಯಸ್ಸಾದವರು ತಮ್ಮಲ್ಲೇ ಗೊಣಗಿಕೊಳ್ಳುತ್ತಾ ಎಲ್ಲರ ಮೇಲೂ ತಮ್ಮ ಅಸಮಾಧಾನವನ್ನು ತೋರಿಸುತ್ತಿರುತ್ತಾರೆ.ಇದರಿಂದ ಏನೂ ಉಪಯೋಗವಿಲ್ಲ ಎನ್ನುವುದು ಅವರಿಗೂ ಗೊತ್ತಿರುತ್ತದೆ.ಆದರೂ ತಮ್ಮ ಅಸಮಾಧಾನವನ್ನು ತೋರಿಸಿಕೊಳ್ಳುವುದಕ್ಕಷ್ಟೇ ಅವರ ಗೊಣಗಾಟ ಸೀಮಿತವಾಗಿರುತ್ತದೆ.
ತನ್ನ ಯಾವುದೋ ಬಯಕೆಯನ್ನು ಗಂಡ ಈಡೇರಿಸಿಕೊಡಲಿಲ್ಲವೆಂದು ದಿನ ಬೆಳಗಾದರೆ ಹೆಂಡತಿ ಮನೆಯಲ್ಲಿ ಗೊಣಗಿಕೊಳ್ಳುವುದು ಎಲ್ಲರ ಗಮನಕ್ಕೆ ಬಂದಿರುತ್ತದೆ.ಹೆಂಡತಿಯರ ಗೊಣಗಾಟ ಜಾಸ್ತಿಯಾದಾಗ ಅದು ಫಲ ಕೊಡುವುದೂ ಉಂಟು.
ಮೇಲ್ಕಂಡ ಗೊಣಗಾಟಗಳು ವಯುಕ್ತಿಕವಾದದ್ದು ಹಾಗು ಈ ಗೊಣಗಾಟದಲ್ಲಿ ಯಾವುದೇ ದ್ವೇಷ ಅಥವಾ ಅಸೂಯೆ ಇರುವುದಿಲ್ಲ.ಒಂದು ರೀತಿ ಪ್ರೀತಿಯುತವಾದ ಹಾಗು ಅಧಿಕಾರಯತವಾದ ಅಸಮಾಧಾನಗಳು ಗೊಣಗಾಟದಲ್ಲಿ ಇರುತ್ತದೆ.
ಇದರ ಮುಂದುವರಿದ ಭಾಗವೇ ಸಾರ್ವತ್ರಿಕ ಗೊಣಗಾಟ.ಇದೂ ಕೂಡ ಮನೆಯಿಂದಲೇ ಪ್ರಾರಂಭವಾಗುತ್ತದೆ.ಬೆಳಿಗ್ಗೆ ಎದ್ದ ತಕ್ಷಣವೇ ನಲ್ಲಿ ತಿರುಗಿಸಿದರೆ ನೀರು ಬರುವುದಿಲ್ಲ.ಆಗ ಸಂಬಂಧಿಸಿದ ಕಛೇರಿಯ ಅಸಮರ್ಪಕ ಕೆಲಸದ ಬಗ್ಗೆ ಗೊಣಗುತ್ತೇವೆ.ಆಮೇಲೆ ನೀರು ಕಾಯಿಸಲು ಕರೆಂಟ್ ಇರುವುದಿಲ್ಲ.ವಿದ್ಯುತ್ ಇಲಾಖೆಯ ಮೇಲೆ ಗೊಣಗಾಟ.ಹೀಗೆ ಸಾಗುತ್ತಾ ಈಚೆಗೆ ಬಂದರೆ ಬಸ್ ಸರಿಯಾಗಿ ಬರುವುದಿಲ್ಲ.ಅಲ್ಲಿಂದ ನಮ್ಮ ಗೊಣಗಾಟಕ್ಕೆ ಇನ್ನೂ ಕೆಲವರ ಬೆಂಬಲ ದೊರಕಿ ಇದು ಸಾರ್ವತ್ರಿಕ ಗೊಣಗಾಟವಾಗುತ್ತದೆ.ಬಸ್ ಬರಲು ಇನ್ನೂ ಸಮಯವಿರುವುದರಿಂದ ಪ್ರಪಂಚದ ಎಲ್ಲಾ ವಿಷಯಗಳ ಬಗ್ಗೆಯೂ ಟೀಕೆ ಟಿಪ್ಪಣಿ ಶುರುವಾಗಿ ನಮ್ಮ ಗೊಣಗಾಟ ಪ್ರಾರಂಭವಾಗುತ್ತದೆ.ರಾಜಕಾರಣಿಗಳು,ಅಧಿಕಾರಿಗಳು,ದಲ್ಲಾಳಿಗಳು,ವ್ಯಾಪಾರಸ್ತರು ಹೀಗೆ ಯಾರೂ ಸರಿಯಿಲ್ಲವೆಂಬ ಗೊಣಗಾಟ.ಸ್ವಾರಸ್ಯವೆಂದರೆ ಈ ಅಸಮರ್ಪಕ ವ್ಯವಸ್ಠೆಯಲ್ಲಿ ಒಂದಲ್ಲ ಒಂದು ರೀತಿ ತಾವೂ ಕೂಡ ಭಾಗಿಯಾಗಿದ್ದೇವೆಂಬ ಅಂಶವನ್ನು ಎಲ್ಲರೂ ಮರೆತುಬಿಟ್ಟಿರುತ್ತೇವೆ.
ಗೊಣಗಾಟದ ಮುಂದುವರಿದ ಭಾಗವೇ ಪ್ರತಿಭಟನೆ.ಆದರೆ ಎಲ್ಲರೂ ತಮ್ಮ ಅಸಹಾಯಕತೆಯನ್ನು ಗೊಣಗಾಟಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳುತ್ತಾರೆ ಹೊರತು ಯಾರೂ ಪ್ರತಿಭಟನೆಗೆ ಇಳಿಯುವುದಿಲ್ಲ.ಯಾಕೆಂದರೆ ಪ್ರತಿಭಟಿಸಿ ತಮ್ಮನ್ನು ತಾವು ತೊಂದರೆಗೆ ಸಿಕ್ಕಿಸಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ವ್ಯವಸ್ಥೆಯ ವಿರುದ್ಧವಾಗಿ ಯಾರೂ ಈಜಲು ಇಷ್ಟಪಡುವುದಿಲ್ಲ. ಅಲ್ಲದೆ ಪ್ರತಿಭಟನೆಗೆ ಇಂದಿನ ವ್ಯವಸ್ಥೆಯಲ್ಲಿ ಯಾವುದೇ ಪ್ರಯೋಜನವಿಲ್ಲ ಎನ್ನುವುದು ಸಹ ವಾಸ್ತವ ಅಂಶ.
ಆದ್ದರಿಂದ ಗೊಣಗಾಟವನ್ನು ಮನುಷ್ಯನ ಅಸಹಾಯಕತೆಯ ಮತ್ತು ಅದಕ್ಕೆ ಪೂರಕವಾದ ಫಲಿತಾಂಶವನ್ನು ಬಯಸದೇ ಇರುವ ಸ್ಥಿತಿಯೆಂದು ಹೇಳಬಹುದು.
ಮತ್ತೆ ಇನ್ನೊಂದು ವಿಷಯವನ್ನು ಪ್ರಸ್ತಾಪಿಸುವುದು ಪ್ರಸ್ತುತವೆನಿಸುತ್ತದೆ.ಜಾಗತಿಕ ಮಟ್ಟದಲ್ಲಿ ವಿಖ್ಯಾತನಾದ ಪಶ್ಛಿಮ ದೇಶದ ಅರ್ಥ ಶಾಸ್ತ್ರಜ್ನನೊಬ್ಬ ತನ್ನ ಸಂಶೋದನೆಯಲ್ಲಿ ಭಾರತದ ಬಗ್ಗೆ ಉದಾಹರಿಸುತ್ತಾನೆ.ಪಾಶ್ಛಿಮಾತ್ಯ ದೇಶಗಳಲ್ಲಿ ಸ್ವಲ್ಪ ಬೆಲೆ ಏರಿಕೆ ಕಂಡು ಬಂದರೆ ಅಥವಾ ಯಾವುದಾದರೂ ರಾಜಕಾರಣಿ ಭ್ರಷ್ಟನಾಗಿದ್ದರೆ ಅಥವಾ ಅನೈತಿಕತೆಯ ಗುಣ ಹೊಂದಿದ್ದಾನೆಂದು ಕಂಡುಬಂದರೆ ಇಡೀ ದೇಶದ ಜನ ಪ್ರತಿಭಟಿಸಿ ಅಲ್ಲೋಲ ಕಲ್ಲೋಲ ಉಂಟು ಮಾಡಿ ಸರಕಾರ ಬದಲಾವಣೆಯಾಗುವಂತೆ ಮಾಡಿಬಿಡುತ್ತಾರೆ.
ಆದರೆ ಭಾರತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದರೂ,ರಾಜಕಾರಣಿಗಳು ನೈತಿಕತೆಯ ಅಧಃಪತನ ಹೊಂದಿದ್ದರೂ,ದಿನ ನಿತ್ಯದ ಅವಶ್ಯಕತೆಗಳ ಧಾರಣೆ ಗಗನಕ್ಕೆ ಏರುತ್ತಿದ್ದರೂ ಯಾವುದೇ ಪ್ರತಿಭಟನೆಯಾಗಲೀ,ಕ್ರಾಂತಿಯಾಗಲೀ ಆಗದೇ ಇರುವುದಕ್ಕೆ ಕಾರಣವೇನು ಎಂಬುದನ್ನು ಯೋಚಿಸಿದಾಗ ಸಮಾಜದ ಹೊಂದಾಣಿಕೆಯ ಗುಣವೇ ಇದಕ್ಕೆ ಪ್ರಬಲ ಕಾರಣ ಎಂದು ಆ ಅರ್ಥಶಾಸ್ತ್ರಜ್ನ ಪ್ರತಿಪಾದಿಸುತ್ತಾನೆ.ಯಾವುದೇ ಅನ್ಯಾಯವನ್ನು,ಅನೈತಿಕತೆಯನ್ನು ತಮ್ಮಲ್ಲೇ ಗೊಣಗಿಕೊಂಡು ಬೇಸರದಿಂದಲೇ ಒಪ್ಪಿಕೊಂಡುಬಿಡುತ್ತಾರೆ ನಮ್ಮ ಜನ.ಗೊಣಗಾಟ ಎಷ್ಟು ಪ್ರಭಾವಶಾಲಿ ಎನ್ನುವುದನ್ನು ನಾವು ಇದರಿಂದ ಕಂಡುಕೊಳ್ಳಬಹುದು.
ಮತ್ತೆ ನಾವು ಇನ್ನೂ ಒಂದು ಆಯಾಮದಿಂದ ಗೊಣಗಾಟದ ಉಪಯೋಗವನ್ನು ಗುರುತಿಸಬಹುದು.ಗೊಣಗಾಟ ವ್ಯಕ್ತಿಯ ಅಸಮಾಧಾನಕ್ಕೆ ಒಂದು Out-let ಎಂದು ಹೇಳಬಹುದು.ನಮ್ಮ ಅಸಮಾಧಾನವನ್ನು ಯಾವುದೇ ರೀತಿಯಲ್ಲಿ ಹೊರಗೆಡವದಿದ್ದರೆ,ಅಂದರೆ ಗೊಣಗಿಕೊಳ್ಳದಿದ್ದರೆ ಒಂದು ದಿನ ಅಸಮಾಧಾನವೇ ಜ್ವಾಲಾಮುಖಿಯಾಗಿ ಸ್ಫೋಟಗೊಳ್ಳಬಹುದು.ಇದು ಒಬ್ಬ ವ್ಯಕ್ತಿಯ ವಿಷಯದಲ್ಲಾದರೆ ದ್ವೇಷಕ್ಕೆ ಕಾರಣವಾಗಬಹುದು ಇಲ್ಲವೇ ಆ ವ್ಯಕ್ತಿ ಅಂತ ರ್ಮುಖಿಯಾಗಿದ್ದರೆ ಆತ್ಮಹತ್ಯೆಯಂತ ವಿಪರೀತಕ್ಕೆ ಇಳಿಯಬಹುದು.
ಅದೇ ಸಮಾಜವಾದರೆ ಪ್ರತಿಭಟನೆ ಹಿಂಸಾಮುಖಿಯಾಗಬಹುದು.ನಕ್ಸಲೈಟ್‍ನಂಥ ಪಂಥಗಳಿಗೆ ಇಂಬುಕೊಡಬಹುದು.ಸದ್ಯಕ್ಕೆ ನಮ್ಮ ಭಾರತೀಯ ಸಮಾಜ ಹಿಂಸಾತ್ಮಕ ಮನೋಭಾವದಿಂದ ಮುಕ್ತವಾಗಿದ್ದರೆ ಅದಕ್ಕೆ ಕಾರಣ ನಮ್ಮಲ್ಲಿರುವ ಗೊಣಗಾಟ ಎನ್ನಬಹುದೇನೋ.
ಇವೆಲ್ಲದರಿಂದ ನನ್ನ ಮಗ ಕೃಷ್ಣಪ್ರಸಾದ್ ತನ್ನ ಬ್ಲಾಗ್‍ಗೆ ಕೊಟ್ಟಿರುವ ಹೆಸರು ಅರ್ಥಪೂರ್ಣವಾಗಿದೆ ಎಂದು ನನಗೆ ಅನ್ನಿಸುತ್ತದೆ.
ಅಲ್ಲದೆ ಇನ್ನೊಂದು ವಿಷಯ.ಮೇಲೆ ಹೇಳಿದ ವಿಷಯಗಳೆಲ್ಲ ಹೊರಗಿನ ಘಟನೆಗಳಿಗೆ ಪ್ರತಿಕ್ರಿಯೆಯಾಗಿರುವಂತಹುದು.ಆದರೆ ನಮ್ಮ ಗೊಣಗಾಟ ಹೆಚ್ಚು ಅರ್ಥಪೂರ್ಣವಾಗಬೇಕಾದರೆ ಗೊಣಗಾಟ ಆಂತರಿಕವಾಗಿರಬೇಕು.ಅಂದರೆ ನಮ್ಮನ್ನು ನಾವೆ ಪ್ರಶ್ನಿಸಿಕೊಳ್ಳುವಂತಿರಬೇಕು.ನಮ್ಮ ಬಗ್ಗೆ ನಾವೇ ಅಸಹನೆಪಟ್ಟುಕೊಳ್ಳಬೇಕು ಸಮಾಜದಲ್ಲಿ ಒಳ್ಳೆಯ ನಾಗರೀಕನಾಗಲು,ಸಮಾಜಕ್ಕೆ ನಾವು ಉತ್ತಮ ಕಾಣಿಕೆಯನ್ನು ನೀಡಲು ಆರೋಗ್ಯಪೂರ್ಣವಾದ ಗೊಣಗಾಟವನ್ನು ಮಾಡಿಕೊಳ್ಳಬೇಕು.ನಂತರ ಅದು ಗೊಣಗಾಟಕ್ಕೆ ಮಾತ್ರ ಸೀಮಿತಗೊಳ್ಳದೆ ಹುಡುಕಾಟಕ್ಕೆ ಮುನ್ನಡೆಸುವಂತಿರಬೇಕು.ಗೊಣಗಾಟ ,ಹುಡುಕಾಟವಾದಾಗ ಮಾತ್ರ ಆರೋಗ್ಯಪೂರ್ಣವಾದ ವ್ಯಕ್ತಿಯಾಗಲು ಸಾಧ್ಯ.ತನ್ಮೂಲಕ ಆರೋಗ್ಯಪೂರ್ಣವಾದ ಸಮಾಜವನ್ನು ಕಟ್ಟಲು ಸಾಧ್ಯ.
ಧನ್ಯವಾದಗಳೊಂದಿಗೆ,
ಸೂರ್ಯಪ್ರಕಾಶ್ ಹುಳಿಯಾರು
28.08.2006 ಸೋಮವಾರ

Thursday, August 24, 2006

ನನ್ನ ಹಾಡು ನನ್ನ ಪಾಡು

ಗಾನ ಪುಷ್ಪ
ಗಾನ ಪುಷ್ಪಗಳಿಂದ ಅರ್ಚನೆಯ ಮಾಡುವೆವು
ಮಾನಾಭಿಮಾನವ ಕಾಪಾಡು ದೇವ

ಆಡೊ ಹುಡುಗರು ನಾವು ಹಿರಿತನ ಬೇಕಿಲ್ಲ
ಒಡವೆಗಳಗೊಡವೆ ನಮಗಂತು ಇಲ್ಲ
ಹಾಡುಹೋಗಳ ನಡುವೆ ನಿನ್ನನ್ನು ಪೂಜಿಪೆವು
ಮೋದಕಾ ಪ್ರಿಯ ಸ್ವಾಮಿ ನಮ್ಮನ್ನು ಪೊರೆಯೋ

ಗಾನ ಪುಷ್ಪಗಳಿಂದ ಅರ್ಚನೆಯ ಮಾಡುವೆವು
ಮಾನಾಭಿಮಾನವ ಕಾಪಾಡು ದೇವ

ಅರಿವಿನಾ ಹರವಿಲ್ಲ ಬುದ್ಧಿಯಾ ಬಲವಿಲ್ಲ
ಸಿರಿಕಂಠವೇ ನಮ್ಮ ಸಿರಿತನಾವೆಲ್ಲ
ಹರಪುತ್ರನೇ ನಿನ್ನ ಕರಮುಗಿದು ಬೇಡುವೆವು
ವರವಿನಾಯಕ ನಮ್ಮ ಹರಸು ತಂದೇ

ಗಾನ ಪುಷ್ಪಗಳಿಂದ ಅರ್ಚನೆಯ ಮಾಡುವೆವು
ಮಾನಾಭಿಮಾನವ ಕಾಪಾಡು ದೇವ

ಇಂಪಾದರೂ ಕಿವಿಗೆ ಕೋಗಿಲೆಗಳಾ ಹಾಡು
ಅರಿವಿಲ್ಲವೇ ನಿನಗೆ ಪರಪುಟ್ಟರಾ ಪಾಡು
ವನಸುಮಗಳು ನಾವು ಮನವಿಟ್ಟು ಹಾಡುವೆವು
ಗಾನಪ್ರಿಯ ಗಣಪತಿಯೆ ಕಾಪಾಡು ದೊರೆಯೇ

ಗಾನ ಪುಷ್ಪಗಳಿಂದ ಅರ್ಚನೆಯ ಮಾಡುವೆವು
ಮಾನಾಭಿಮಾನವ ಕಾಪಾಡು ದೇವ