Sunday, September 24, 2006

ಹನಿಜೇನು

1)ಮರಗಿಡಗಳನ್ನು ಪ್ರೀತಿಸದವನು
ಮನುಷ್ಯರನ್ನು ಪ್ರೀತಿಸಲಾರ
2)ಜೀವಕೊಟ್ಟ ತಾಯಿಗೆ ಕೊಟ್ಟಿದ್ದೇನು ನಾವು
ಹುಟ್ಟುವಾಗ ಬೆಳೆಯುವಾಗ ಹೊಟ್ಟೆತುಂಬ ನೋವು
3)ಚಿಕ್ಕ ವಯಸ್ಸಿನ ತಂಗಿಯ ಗಂಡ
ಸತ್ತ ಸುದ್ದಿ ತಿಳಿದ ಪುರೋಹಿತ
ಪಂಚಾಂಗ ನೋಡಿ ಒಳ್ಳೆ ನಕ್ಷತ್ರದಲ್ಲಿ
ಸತ್ತಿದ್ದಾನೆಂದು ತಿಳಿದು ಸಂತಸಪಟ್ಟ
4)ಎಲ್ಲ ಹೂವಿನಂತಲ್ಲ ನನ್ನ ಶೈಲ
ಅವಳು ಒಂದು ತಾವರೆ
ಎಲ್ಲ ನಕ್ಷತ್ರ್ಗಳಂತಲ್ಲ ನನ್ನ ಲೈಲ
ಅವಳು ಧೃವ ತಾರೆ

Monday, September 18, 2006

ಅಕ್ಕ ಏನೇ ಸಡಗರ(ಒಂದು ಕವನ)

ಆಗಸದಿ ಚಂದಿರನ ತೋರಿಸುತ
ನಮ್ಮಮ್ಮ ನೀಡಿದ ಎದೆಯ ಹಾಲು
ಅಳುತಿದ್ದ ಮಕ್ಕಳಿಗೆ ಮುತ್ತನಿತ್ತಳು ಅಮ್ಮ
ತೋರಿಸುತ ತಾರೆಗಳ ಸಾಲು

ಅಕ್ಕ ಹೇಳೇ ನೀನು ಎಲ್ಲಿತ್ತು
ನಿನಗೆ ತೊದಿಸಲು ಚಿನ್ನ ಮುತ್ತು
ನೆನಪಿದೆಯ ನಿನಗೆ ಅಮ್ಮ ನೀಡಿದ
ಅಕ್ಕರೆಯ ಕೈಯ ತುತ್ತು

ಯಾವ ಮೋಹನ ಮುರಳಿ ನಾದಕೆ
ಮರುಳಾಗಿ ಹಾರಿದೆ ದೂರಕೆ
ಅಮ್ಮ ಮರೆತಳು ಎಲ್ಲ ನೋವನು
ಮಗಳ ಸುಖದ ಕನಸಿಗೆ

ಕನಸು ನನಸಾಗಿಹುದು,ನೀನು ಹಾಯಾಗಿರುವೆ
ಅಮ್ಮನಾ ನೆಮ್ಮದಿಗೆ ಇದು ಕಾರಣ
ಐವತ್ತು ತುಂಬಿದಾ ಅಮ್ಮನಾ ಸಂಭ್ರಮಕೆ
ನಗುತಿಹಿದು ಬಾಗಿಲಲಿ ಎಲೆ ತೋರಣ

ಮಣ್ಣಿನಾ ವಾಸನೆಯ ಮರೆತಿಲ್ಲ ನೀನು
ಮಡಿಲಕ್ಕಿ ನೀಡಿದಾ ನಿನ್ನ ತವರ
ಚಂದಿರನ ನೋಡುತ್ತ ಅಮ್ಮನನು ಕಾಣುತ್ತ
ಅಕ್ಕ ಹೇಳೇ ನಿನಗೆ ಎಷ್ಟು ಸಡಗರ

(ಈ ತಿಂಗಳಲ್ಲಿ ಅಮೆರಿಕಾದ ಬಾಲ್ಟಿಮೋರ್‍ನಲ್ಲಿ ನಡೆದ ಕನ್ನಡ ಸಮ್ಮೇಳನದ ಸಂದರ್ಭದ ನೆನಪಿಗೆ)
ಸೂರ್ಯಪ್ರಕಾಶ್ ಹುಳಿಯಾರು

Thursday, September 14, 2006

ಹುಡುಕಾಟದ ಬಗ್ಗೆ ಒಂದು ಗೊಣಗಾಟ(ಲಲಿತ ಪ್ರಬಂಧ)

ನಮ್ಮ ಮದುವೆಯಾಗಿ ಸರಿಯಾಗಿ 25 ವರ್ಷಗಳಾಗಿ ಹೋಗಿದೆ.ಇದೇನೂ ಅಂಥ ದೊಡ್ಡವಿಷಯವೇನೂ ಅಲ್ಲ.ಯಾಕೆಂದರೆ ಮದುವೆಯಾಗಿ 50 ವರ್ಷಗಳನ್ನು ಪೂರೈಸಿದವರು ನನಗೆ ತಿಳಿದಂತೆ ಬೇಕಾದಷ್ಟು ಮಂದಿ ಇದ್ದಾರೆ.ಮದುವೆಯಾದ ಮೇಲೆ ಗಂಡ ಹೆಂಡತಿ ಜಗಳವಾಡುವುದು ಸಾಮಾನ್ಯ ವಿಷಯ.ಕೆಲವರಂತೂ ಪ್ರತಿ ದಿನ ಜಗಳವಾಡುತ್ತಾ ಇರುತ್ತಾರೆ.
ಆದರೆ ನಾನು ಈಗ ಹೇಳುತ್ತಿರುವುದು ಒಂದೇ ವಿಷಯದ ಮೇಲೆ ಸತತವಾಗಿ ಪ್ರತಿ ದಿನ ಜಗಳವಾಡುವ ದಂಪತಿಗಳು ಇದ್ದಾರೆಯೇ?ಅದೂ ಸತತವಾಗಿ 25 ವರ್ಷ.ಖಂಡಿತ ಇದ್ದಾರೆ.ಬೇರಾರು ಅಲ್ಲ.ನಾವೇ.ಒಂದೇ ವಿಷಯದ ಮೇಲೆ ಪ್ರತಿ ದಿನ ಜಗಳವಾಡುವ ದಂಪತಿಗಳಿಗೆ ಪ್ರಶಸ್ತಿಯೇನಾದರೂ ನೀಡಿದರೆ ಅದು ನಮಗೇ ಸಿಕ್ಕಬೇಕು.ಗಿನ್ನಿಸ್ ಜಾಗತಿಕ ದಾಖಲೆಗಾಗಲೀ ಅಥವಾ ಹೋಗಲಿ ಲಿಮ್ಕಾ ರಾಷ್ಟ್ರೀಯ ದಾಖಲೆಗಾದರೂ ನಮ್ಮ ಹೆಸರು ಸೇರಲೇ ಬೇಕು.
ನಿಮಗೆ ಕುತೂಹಲವಿರಬಹುದು.ಯಾವ ವಿಷಯದ ಮೇಲೆ ನಮ್ಮ ಜಗಳ ಅಂತ.ಇದರಲ್ಲಿ ವಿಶಿಷ್ಟವಾದದ್ದೇನೂ ಇಲ್ಲ.ಪ್ರತಿಯೊಬ್ಬ ದಂಪತಿಗಳೂ ಒಂದಲ್ಲ ಒಂದು ಬಾರಿ ಈ ವಿಷಯದಲ್ಲಿ ಜಗಳ ಆಡೇ ಇರುತ್ತಾರೆ.ಆದರೆ ಪ್ರತಿ ದಿನ ಒಂದೇ ವಿಷಯದ ಮೇಲೆ ನಾವು ಜಗಳ ಆಡುತ್ತೇವೆ ಎನ್ನುವುದಷ್ಟೇ ನಮ್ಮ ವಿಶೇಷ.ಅದು "ಹುಡುಕಾಟ".
ನೋಡಿ.ಬೆಳಗಾದರೆ ಸಾಕು.ನನ್ನ ಹುಡುಕಾಟ ಪ್ರಾರಂಭವಾಗುತ್ತದೆ.ಮುಖ ತೊಳೆದುಕೊಂಡು ಒರೆಸಿಕೊಳ್ಳಲು ಟವಲ್ ಸಿಗುವುದಿಲ್ಲ.ಒಂದು ಟವಲ್‍ನ್ನು ಬಚ್ಚಲ ಮನೆಯಲ್ಲಿ ಹಾಕಿರು ಎಂದು ಹೇಳಿದ್ದೇನೆ.ಇಲ್ಲ ಹಾಕುವುದಿಲ್ಲ.ನಂತರ ತಲೆ ಬಾಚಿಕೊಳ್ಳಲು ಹೋದರೆ ಬಾಚಣಿಗೆ ಸಿಗುವುದಿಲ್ಲ.ಅದನ್ನು ಹುಡುಕಬೇಕು.ಆಫೀಸಿಗೆ ಹೋಗಲು ಕರ್ಚೀಪು ಹುಡುಕಬೇಕು.ಕಡೆಗೆ ಚಪ್ಪಲಿಯನ್ನೂ ಸಹ ಕೊನೆ ಪಕ್ಷ ಹತ್ತು ನಿಮಿಷ ಹುಡುಕಿದಮೇಲೆ ಸಿಗುವುದು.ಹೀಗೆ ಪ್ರತಿ ದಿನ ಹುಡುಕುವುದಕ್ಕೆ ಮತ್ತು ಅದರ ಬಗ್ಗೆ ಜಗಳ ಕಾಯುವುದಕ್ಕೇ ನಮ್ಮ ಸಮಯವೆಲ್ಲ ವ್ಯರ್ಥವಾಗುತ್ತಿದೆ.ಒಂದು ದಿನವಲ್ಲ,ಒಂದು ವರ್ಷವಲ್ಲ ಸತತ 25 ವರ್ಷಗಳು ಹೀಗೆ ಕಳೆದು ಹೋಗಿವೆ.
ಹೀಗೆ ಹುಡುಕುತ್ತಾ,ಜಗಳ ಕಾಯುತ್ತಾ, ಬೇಸರವಾಗಿ ಒಂದು ದಿನ ನನ್ನ ಹೆಂಡತಿಗೆ ಹೇಳಿದೆ.ನಮ್ಮ ಮನೆಯಲ್ಲಿ ಹುಡುಕಿದ ತಕ್ಷಣ ಸಿಗುವುದು ಎರಡೇ ಎರಡು.ಒಂದು ಬಚ್ಚಲ ಮನೆಯ ಹಂಡೆ(ಆಗ ನಮ್ಮ ಮನೆಯಲ್ಲಿ ನೀರು ಕಾಸಲು ಹಂಡೆ ಇತ್ತು) ಹಾಗು ಟಾಯ್ಲೆಟ್‍ನಲ್ಲಿ ಬಕೇಟು ಎಂದೆ.ಇದರಿಂದ ನನ್ನವಳಿಗೆ ಬೇಸರವಾಗಲಿ ಅಥವಾ ಸಿಟ್ಟಾಗಲಿ ಬರಲಿಲ್ಲ.ಅದರ ಬದಲಿಗೆ ನಾನು ಜೋಕ್ ಹೇಳಿದೆನೆಂದು ತನ್ನ ಸ್ನೇಹಿತರ ಹತ್ತಿರ ಹೇಳಿಕೊಂಡು ಈಗಲೂ ನಗುತ್ತಿರುತ್ತಾಳೆ.
ಹೀಗೆ ನನ್ನ ಹುಡು"ಕಾಟ" ಜಾಸ್ತಿಯಾಗಿರಬೇಕು.ನನ್ನ ಕಾಟ ತಡೆಯಲಾರದೆ ಅವಳಿಗೂ ಬೇಸರವಾಗಿರಬೇಕು.ಒಂದು ದಿನ ಹೇಳೇ ಬಿಟ್ಟಳು."ಹೌದು ರೀ,ಸಂಸಾರ ಎಂದ ಮೇಲೆ ಹುಡುಕಾಟ ಇದ್ದಧ್ಧೇ.ಚೆನ್ನಾಗಿ ಹುಡುಕಿದ ಮೇಲೇ ಒಳ್ಳೆ ವಸ್ತು ಸಿಗುವುದು.ನಮ್ಮಪ್ಪ ಜಾಸ್ತಿ ಹುಡುಕಲಿಲ್ಲ ಅದಕ್ಕೆ ನೀವು ಸಿಕ್ಕಿದಿರಿ.ನಿಮ್ಮಮ್ಮ ಜಾಸ್ತಿ ಹುಡುಕಿದ್ದಕ್ಕೆ ನಾನು ಸಿಕ್ಕಿದೆ.ನಿಮ್ಮ ಹತ್ತಿರ ಒದ್ದಾಡಿ ಒದ್ದಾಡಿ ನನಗೂ ಸಾಕಾಗಿದೆ.ನಾನು ಕೆರೆಯೋ ಭಾವಿನೋ ಹುಡುಕ್ಕೋತೀನಿ" ಎಂದು ನನ್ನನ್ನು ಅಣಕಿಸುವ ರೀತಿ ಹೇಳಿದಳಲ್ಲದೆ ಭಯವನ್ನು ಹುಟ್ಟಿಸಿಬಿಟ್ಟಳು.
ಅವಳ ಮಾತನ್ನು ಯೋಚಿಸುತ್ತ ಕುಳಿತಿದ್ದೆ.ವಾಚ್ಯಾರ್ಥವೇನೋ ನನಗೆ ತಿಳಿಯಿತು.ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲಿ ಹೆಂಡತಿ ತನ್ನ ಗಂಡನನ್ನು ಹೆದರಿಸಲು ಈ ರೀತಿಯ ಮಾತುಗಳನ್ನು ಆಡುತ್ತಿರುತ್ತಾರೆ.ಅದರ ಬಗ್ಗೆ ನಾವು ಜಾಸ್ತಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.ನನ್ನ ಹೆಂಡತಿ ಹೇಳಿದ ಮಾತುಗಳನ್ನು ಗಾಡವಾಗಿ ಆಲೋಚಿಸಿದಾಗ ಆ ಮಾತುಗಳಲ್ಲಿ ತತ್ವಜ್ನಾನಿಯ ಮಾತುಗಳು ನನಗೆ ಕಂಡು ಬಂತು.
ಅಕ್ಕಮಹಾದೇವಿ ಮೈ ಮೇಲೆ ಅರಿವೆ ಇಲ್ಲದೆ ಚನ್ನ ಮಲ್ಲಿಕಾರ್ಜುನನನ್ನು ಹುಡುಕಿಕೊಂಡು ಆ ಶ್ರೀ ಶೈಲಕ್ಕೆ ಹೋದಳು.ಆದರೆ ನನ್ನ ಹೆಂಡತಿ ಈ ಶೈಲ ಮೈಮೇಲೆ ಅರಿವಿಲ್ಲದೆ ಆಡಿದ ಮಾತುಗಳು ನನ್ನ "ಹುಡುಕಾಟ" ಕ್ಕೊಂದು ಹೊಸ ಆಯಾಮ ನೀಡಿತು.
ಹೌದು.ಮಾನವ ಈ ಪ್ರಪಂಚದಲ್ಲಿ ಅಸ್ತಿತ್ವ ಕಂಡುಕೊಂಡಾಗಿನಿಂದ ಹುಡುಕಾಟ ಪ್ರಾರಂಭವಾಗಿದೆ.ಮೊದಲು ಮೂಲಭೂತ ಅವಶ್ಯಕತೆಗಳಿಗಾಗಿ ಹುಡುಕಾಟ.ಹೊಟ್ಟೆಗೆ,ನಂತರ ಬಿಸಿಲು ಮಳೆಯಿಂದ ರಕ್ಷಿಸಿಕೊಳ್ಳಲು ಆಸರೆಗಾಗಿ ಹುಡುಕಾಟ.ನಂತರ ತಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಏನೇನೋ ಹುಡುಕಾಟ ಪ್ರಾರಂಭವಾಗಿ ಅನೇಕ ತಂತ್ರಜ್ನಾನಗಳು ಅವಿಷ್ಕಾರಗೊಂಡವು.ಪಾಶ್ಛಿಮಾತ್ಯರು ತಮ್ಮ ದೈಹಿಕ ಹಾಗು ಭೌತಿಕ ಉನ್ನತಿಗಾಗಿ "ಹುಡುಕಾಟ" ಪ್ರಾರಂಭಿಸಿದರೆ ಪೌರ್ವಾತ್ಯರು ಅದರಲ್ಲೂ ಮುಖ್ಯವಾಗಿ ನಾವು ಭಾರತೀಯರು ಆಧ್ಯಾತ್ಮಿಕ "ಹುಡುಕಾಟ" ವನ್ನು ಪ್ರಾರಂಭಿಸಿದೆವು.ಇದರಿಂದ ಇಡೀ ವಿಶ್ವಕ್ಕೆ ಮಾದರಿಯಾಗಿರುವಂತಹ ಸಂಸ್ಕೃತಿಯನ್ನು ಪಡೆದದ್ದಲ್ಲದೆ ನಾವು ಒಳ್ಳೆಯ ನಾಗರೀಕರಾಗಿ ಬಾಳಲು ಸಾಧ್ಯವಾಯಿತು.ಶಂಕರಾಚಾರ್ಯರಾಗಲೀ,ವಚನಕಾರರಾಗಲೀ ಅಥವಾ ದಾಸ ಶ್ರೇಷ್ಟರುಗಳಾಗಲೀ ಉತ್ತಮ "ಹುಡುಕಾಟ" ದತ್ತ ಹೆಜ್ಜೆ ಹಾಕಿದರು.
ಈರೀತಿಯ "ಹುಡುಕಾಟ" ದ ಪರಾಕಾಷ್ಟತೆಯನ್ನು ನಾವು ಉದ್ಧಾಲಕ ಮುನಿಯ ಮಗನಾದ ನಚೀಕೇತನಲ್ಲಿ ಕಾಣಬಹುದು.ಚಿಕ್ಕ ಹುಡುಗನಾದ ನಚೀಕೇತನು ಮನುಷ್ಯನ ಮರಣದ ನಂತರ ನಾವು ಏನಾಗುತ್ತೇವೆ ನಮ್ಮ ಪ್ರಾಣ ಎಲ್ಲಿ ಹೋಗುತ್ತದೆ ಎನ್ನುವುದರ ಹುಡುಕಾಟಕ್ಕೆ (ಹುಡುಗಾಟ??) ಹೋಗಿ ಸಾಕ್ಷಾತ್ ಯಮನನ್ನು ದರ್ಶನ ಮಾಡಿದುದಲ್ಲದೆ ಅವನ ಸಂದರ್ಶನವನ್ನೂ ಮಾಡಿದನು.ಜೀವನದಲ್ಲಿ ಸುಖ ಸಂತೋಷ ಹಾಗು ಭೋಗ ಜೀವನವನ್ನು ನಡೆಸಲು ಅಷ್ಟೈಶ್ವರ್ಯವನ್ನು ನೀಡುವುದಾಗಿ ತಿಳಿಸಿ ದರೂ ಅದನ್ನೆಲ್ಲ ತಿರಸ್ಕರಿಸಿದ ನಚೀಕೇತನ ವೃತ್ತಾಂತವನ್ನು ಕಠೋಪನಿಷತ್‍ನಲ್ಲಿ ಪಡೆಯಬಹುದು.
ಶ್ರೀರಾಮ ಹನುಮಂತನಂತಹ ಭಕ್ತ ಶ್ರೇಷ್ಟನನ್ನು ಪಡೆದದ್ದು ಸೀತೆಯ ಹುಡುಕಾಟದಲ್ಲಿದ್ದಾಗಲೇ ಎನ್ನುವುದನ್ನು ನಾವು ಗಮನಿಸಬೇಕು.
ತನ್ನ ಮೇಲೆ ಕೋಪಗೊಂಡು ಹೊರಟುಹೋದ ಲಕ್ಷ್ಮಿಯನ್ನು ಹುಡುಕಿಕೊಂಡು ವಿಷ್ಣು ಭೂಲೋಕಕ್ಕೆ ಬಂದು ತಿರುಪತಿಯಲ್ಲಿ ವೆಂಕಟೇಶನಾಗಿ ನೆಲೆಸಿದ್ದು ನಮಗೆಲ್ಲಾ ತಿಳಿದೇ ಇದೆ.
ಮೇಲಿನ ಘಟನೆಗಳೆಲ್ಲಾ ಅತ್ಯಂತ ಗಂಭೀರ ಸ್ವರೂಪದವಾದ್ದರಿಂದ ಹಾಗು ಅವು ದೊಡ್ಡವರ ವಿಷಯವಾದ್ದರಿಂದ ನಾವು ಸದ್ಯಕ್ಕೆ ಆ ವಿಷಯಗಳನ್ನು ಹುಡುಕುವುದು ಬೇಡ.
ಅಲ್ಲದೆ ನಮ್ಮ ಹುಡುಕಾಟವೇ ಬೇರೆ.ಅವರ ಹುಡುಕಾಟವೇ ಬೇರೆ.
ಬಯಲೊಳಗೆ ಆಲಯವನು ಕಂಡ ವಚನಕಾರರೆಲ್ಲಿ.ಮನೆ ಬಾಡಿಗೆ ಪಡೆಯಲು,ಸ್ವಂತ ಮನೆ ಹೊಂದಲು ಪಡಬಾರದ ಪಾಡು ಪಡುವ ನಾವೆಲ್ಲಿ.
ಕಟ್ಟಿಕೊಂಡ ಗಂಡನನ್ನು ಬಿಟ್ಟು ಆ ಚೆನ್ನಮಲ್ಲಿಕಾರ್ಜುನನನ್ನು ಹುಡುಕಿಕೊಂಡು ಹೊರಟ ಅಕ್ಕ ಮಹದೇವಿ ಎಲ್ಲಿ.ನಮ್ಮ ಹೆಣ್ಣು ಮಕ್ಕಳಿಗೆ ಗಂಡನ್ನು ಹುಡುಕಲು ಒದ್ದಾಡುವ ನಾವು ಎಲ್ಲಿ.
ಇರಲಿ.ಗಂಡು ಹೆಣ್ಣಿನ ಹುಡುಕಾಟದ ಬಗ್ಗೆ ಒಂದು ಸ್ವಾರಸ್ಯಕರ ಘಟನೆ ನೆನಪಿಗೆ ಬರುತ್ತಿದೆ.
ಒಬ್ಬ ವರ ಮಹಾಶಯ ಹೆಣ್ಣನ್ನು ನೋಡಲೆಂದು ಹೋಗುತ್ತಿದ್ದ.ಹೆಣ್ಣಿನ ಮನೆಯಲ್ಲಿ ಸಾಮಾನ್ಯವಾಗಿ ದೊರೆಯುವ ಸತ್ಕಾರ,ರುಚಿಕರವಾದ ತಿಂಡಿಗಳನ್ನೆಲ್ಲಾ ತಿಂದು ನಂತರ ಯಾವುದೋ ಒಂದು ಕಾರಣ ಹೇಳಿ ಹೆಣ್ಣನ್ನು ನಿರಾಕರಿಸುತ್ತಿದ್ದ.ಇದನ್ನೇ ಅವನು ಒಂದು ಹವ್ಯಾಸವನ್ನಾಗಿ ಮಾಡಿಕೊಂಡುಬಿಟ್ಟ.
ಒಂದು ಬಾರಿ ಹೀಗೆ ಅವನು ಹೆಣ್ಣನ್ನು ನೋಡಲೆಂದು ಒಬ್ಬರ ಮನೆಗೆ ಹೋಗಿದ್ದಾನೆ.ಪಾಪ ಹೆಣ್ಣಿನ ತಂದೆ ತನ್ನ ಮಗಳನ್ನು ವರನು ಒಪ್ಪಬಹುದೆಂಬ ಆಸೆಯಿಂದ ಕುಳಿತು ವರಮಹಾಶಯನಿಗೆ ಎಲ್ಲಾ ಸತ್ಕಾರಗಳನ್ನೂ ಮಾಡಲು ನಿಂತಿದ್ದಾನೆ.ತನ್ನ ಹೆಂಡತಿಗೆ ತಿಂಡಿ ತರಲು ಆದೇಶಿಸಿದ ಕನ್ಯಾ ಪಿತೃ.ಹಾಗೆಯೇ ಹೆಣ್ಣಿನ ತಾಯಿ ಮಗಳನ್ನೂ ಜೊತೆಯಲ್ಲಿ ಕರೆದುಕೊಂಡು ಬಂದು ತನ್ನ ಭಾವಿ ಅಳಿಯನನ್ನು ನೋಡಿದಳು.ಅದೇಕೋ ಏನೋ ಮಗಳನ್ನು ಹಾಗೆಯೇ ವಾಪಸು ಕರೆದುಕೊಂಡು ಹೋಗಿ ಮತ್ತೆ ತಾನೊಬ್ಬಳೇ ಬಂದು ಕುಳಿತಿದ್ದ ವರ ಮಹಾಶಯನಿಗೆ ಬಾಯಿಗೆ ಬಂದಂತೆ ಬೈಯ್ಯತೊಡಗಿದಳು.ವರಮಹಾಶಯ ಗಾಬರಿಯಾಗಿಬಿಟ್ಟ.ಅಲ್ಲದೆ ಹೆಣ್ಣಿನ ತಂದೆಗೂ ವಿಪರೀತ ಆತಂಕವಾಗಿಬಿಟ್ಟಿತು.ನಂತರ ನಿಧಾನವಾಗಿ ವಿಚಾರಿಸಿದಾಗ ಹುಡುಗಿಯ ತಾಯಿ ಹೇಳಿದ್ದಿಷ್ಟು.ಈಗ ತನ್ನ ಮಗಳನ್ನು ನೋಡಲು ಬಂದಿರುವ ವರ ಮಹಾಶಯ ತನ್ನನ್ನೂ ನೋಡಲು ಬಂದಿದ್ದ ಎಂದು.
ಹೀಗೆ ಹುಡುಕಾಟ ಕೆಲವೊಮ್ಮೆ ಸ್ವಾರಸ್ಯಕರವಾಗಿರುತ್ತದೆ.
ಇನ್ನೊಂದು ಘಟನೆ ನೋಡಿ.
ಒಬ್ಬಳು ವಯಸ್ಸಾದ ಹಣ್ಣು ಹಣ್ಣು ಮುದುಕಿ.ಬೆನ್ನು ಗೂನಾಗಿದೆ.ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಳೆ.ಇದನ್ನು ನೋಡಿದ ಒಬ್ಬ ಪಡ್ಡೆ ಹುಡುಗ ಮುದುಕಿಯನ್ನು ಚುಡಾಯಿಸಲೆಂದು ಕೇಳಿದ."ಅಜ್ಜಿ,ಏನನ್ನೋ ಹುಡುಕ್ತಾ ಇದೀಯಾ?"
ಹುಡುಗನ ತುಂಟಾಟ ಅಜ್ಜಿಗೆ ತಿಳಿಯಿತು.ಅದು ಕಿಲಾಡಿ ಅಜ್ಜಿ.ಅಜ್ಜಿ ಹೇಳಿತು."ಹೌದು ಮಗ,ನನ್ನ ಯವ್ವನ ಕಳೆದು ಹೋಗಿದೆ.ಹುಡುಕ್ಕೊಡ್ತೀಯಾ?".ಹುಡುಗ ನಿರುತ್ತರನಾದ .
ಮನೆಗಾಗಿ ಹುಡುಕಾಟ,ಕೆಲಸಕ್ಕಾಗಿ ಹುಡುಕಾಟ,ಗಂಡು ಹೆಣ್ಣಿಗಾಗಿ ಹುಡುಕಾಟ,ಅಂತರಂಗ,ಬಹಿರಂಗದ ಹುಡುಕಾಟ ಹೀಗೆ ಅನೇಕ ರೀತಿಯಲ್ಲಿ ಹುಡುಕಾಟದ ವ್ಯಾಪ್ತಿ ವಿಶಾಲವಾಗಿದೆ.
ಇತ್ತೀಚೆಗೆ ಹುಡುಕಾಟದ ತೊಂದರೆಯನ್ನು ಕಡಿಮೆ ಮಾಡಲು ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ.ಇದರಿಂದ ಅನೇಕ ಸಮಸ್ಯೆಗಳು ಬಗೆ ಹರಿದಿವೆ.
ಸದ್ಯದಲ್ಲಿ ಪ್ರಪಂಚದ ಎಲ್ಲಾ ಕಡೆ ವ್ಯಾಪಕವಾಗಿ ಬಳಕೆಯಲ್ಲಿರುವ ಕಂಪ್ಯೂಟರ್‍ನಲ್ಲೂ ಸಹ ಮರೆತು ಹೋದ ನಮ್ಮ ಫೈಲ್‍ಗಳನ್ನು ಹುಡುಕಲು"SEARCH"ನ ಅನುಕೂಲತೆ ಇದೆ.
ಇದೇ ರೀತಿ ಹುಡುಕಾಟದ ಬಗ್ಗೆ ನನ್ನ ಗೊಣಗಾಟ ಮುಂದುವರಿದಿದ್ದೇ ಆದರೆ ನೀವು ನನ್ನನ್ನು ಹುಡುಕಲು ಶುರು ಮಾಡಿಬಿಡಬಹುದು.ಆದ್ದರಿಂದ ಸದ್ಯಕ್ಕೆ ನನ್ನ ಗೊಣಗಾಟವನ್ನು ಇಲ್ಲಿಗೇ ನಿಲ್ಲಿಸುತ್ತೇನೆ.
ವಂದನೆಗಳೊಂದಿಗೆ.
ಹುಳಿಯಾರುಪ್ರಕಾಶ್ .

Wednesday, September 13, 2006

ಒಂದು ಪ್ರಾರ್ಥನೆ(ಕವನ)

1) ಯಾರ ದೂರಲಿ ಯಾರ ಹಳಿಯಲಿ
ನನ್ನ ಈ ಪರಿ ಪಾಡಿಗೆ
ದನಿಯು ಸಹ ಸಿಗದಾಗಿದೆ
ನನ್ನ ನೋವಿನ ಹಾಡಿಗೆ.

2)ಎಷ್ಟು ಕಷ್ಟವ ಕೊಡುವೆ ಪ್ರಭುವೆ
ನನ್ನ ಯಾವ ತಪ್ಪಿಗೆ
ಇಷ್ಟು ನಿಷ್ಟುರ ನೋವುಗಳಿಗೆ
ಇಹುದೆ ನಿನ್ನ ಒಪ್ಪಿಗೆ.

3)ನಡೆಯಲಾಗದ ನಡುವ ಪಡೆದು
ನಡೆಸುತಿಹೆನು ಜೀವನ
ಪಡೆಯಬಾರದ ವಿಧಿಯ ಪಡೆದು
ಉಡುಗಿ ಹೋಗಿದೆ ಚೇತನ.

4)ಊರುಗೋಲಾಗಿಹೆನು ನಾನು
ನನ್ನ ಮಡದಿ ಮಗುವಿಗೆ
ಮುರಿದು ಕೋಲನು ದೊರೆಯೆ ನೀನು
ತಳ್ಳದಿರು ಮುಳ್ಳ ಮಡುವಿಗೆ.

5)ಹಾರೊ ಹಕ್ಕಿಯ ರೆಕ್ಕೆಯನ್ನು
ಕಡಿಯದಿರು ಓ ತಂದೆಯೇ
ಗೂಡು ಸೇರುವ ದಾರಿಯಿನ್ನು
ದೂರವಿರುವುದು ಬಂಧುವೆ.

6)ಗಂಧ ಸೂಸಲು ಪುಷ್ಪ ಅರಳಲು
ಮೊಗ್ಗು ಒಂದು ಕಾದಿದೆ
ಎಳೆಯ ಗಿಡದ ಬೇರುಗಳನು
ಕಳಚದಿರು ಓ ಬಂಧುವೆ.
ಸೂರ್ಯಪ್ರಕಾಶ್ ಹುಳಿಯಾರ್