Sunday, March 02, 2008

ದ್ವೀಪದೊಳಗೊಂದು ದೀಪ

ಓಂ

ದ್ವೀಪದೊಳಗೊಂದು ದೀಪ

ನೆನಪು ಹಿಂದೆ ಸರಿಯುತ್ತಿದೆ.ಮೂರು ವರುಷಗಳ ಹಿಂದೆ ನಾನು ಉನ್ನತ ಶಿಕ್ಷಣಕ್ಕಾಗಿ ದೂರದ ಆಸ್ಟ್ರೇಲಿಯಾದ ಹೋಬರ್ಟ್ ಗೆ ಬಂದಾಗ ಇಲ್ಲಿ ಕನ್ನಡಿಗರಿರಲಿ ನೋಡಲು ಒಬ್ಬ ಭಾರತೀಯ ಸಹಿತ ಕಣ್ಣಿಗೆ ಬೀಳುತ್ತಿರಲಿಲ್ಲ.ಅಂದ ಹಾಗೆ ಹೋಬರ್ಟ್ ಇರುವುದು ಆಸ್ಟ್ರೇಲಿಯಾದ ತಾಸ್ಮೇನಿಯ ಎಂಬ ರಾಜ್ಯದಲ್ಲಿ.ಎಲ್ಲರಿಗೂ ತಿಳಿದಿರುವ ಹಾಗೆ ಆಸ್ಟ್ರೇಲಿಯ ಒಂದು ದೊಡ್ಡ ದ್ವೀಪ.ದ್ವೀಪದ ಪಕ್ಕ ದಲ್ಲಿರುವ ಒಂದ ಸಣ್ಣ ದ್ವೀಪವೇ ತಾಸ್ಮೇನಿಯಾ.ಇದರ ಮುಖ್ಯ ಪಟ್ಟಣ ಹೋಬರ್ಟ್.ಇಲ್ಲಿನ ಜನಸಂಖ್ಯೆ ಸುಮಾರು ಎರಡರಿಂದ ಎರಡು ವರೆ ಲಕ್ಷ.ಇಲ್ಲಿ ಪ್ರಸಿದ್ಡವಾದ ತಾಸ್ಮೇನಿಯಾ ವಿಶ್ವವಿದ್ಯಾಲಯವಿದೆ.ಇಲ್ಲಿಯೇ ನಾನು ಕಂಪ್ಯೂಟರ್ ನಲ್ಲಿ ಮಾಸ್ಟೆರ್ ಡಿಗ್ರಿ ಮಾಡಲು ಬಂದಿದ್ದು.

ಊರು ಬಿಟ್ಟು ಇಷ್ಟು ದೂರ ಬಂದ ಮೇಲೆ ಒಂದೇ ಸಮನೆ ಏಕಾಂಗಿತನ ಕಾಡಲಾರಂಭಿಸಿತು.ಸಂಜೆಯ ಸಮುದ್ರ ತೀರದ ತಂಗಾಳಿಯಾಗಲೀ,ರಾತ್ರಿ ಹೊತ್ತಿನ ಚಂದ್ರನ ತಂಪಾಗಲೀ ಅಥವಾ ಆಗಸದ ನಕ್ಷತ್ರಗಳನ್ನು ಹೊತ್ತಿನ ಅರಿವಿಲ್ಲದೇ ಎಣಿಸುವುದಾಗಲೀ ನನಗೆ ನೆಮ್ಮದಿಯನ್ನು ನೀಡುತ್ತಿರಲಿಲ್ಲ.ಇಪ್ಪತ್ನಾಲ್ಕು ಘಂಟೆಯೂ ಊರಿನ ಧ್ಯಾನ ಮಾಡುವುದೇ ಆಗಿ ಹೋಗಿತ್ತು.ಎಷ್ಟೋ ಬಾರಿ ವಾಪಸು ಊರಿಗೆ ಹೋಗಿಬಿಡಬೇಕೆಂದು ಅನ್ನಿಸಿದ್ದೂ ಉಂಟು.ಆದರೆ ಸಾಲ ಸೋಲ ಮಾಡಿಕೊಡು ಇಷ್ಟು ದೂರ ಬಂದ ಮೇಲೆ ವಾಪಸು ಊರಿಗೆ ಹೋಗಿ ಹೇಗೆ ಮುಖ ತೋರಿಸುವುದು.ನನ್ನ ಓದನ್ನು ಮುಗಿಸಿಕೊಂಡೇ ಹೋಗಬೇಕೆಂದು ನಿರ್ಧರಿಸಿದೆ.ಇಲ್ಲದಿದ್ದರೆ ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ಕಳಿಸಿದ ತಂದೆ ತಾಯಿಗಳಿಗೆ ಮೋಸ ಮಾಡಿದಂತಾಗುತ್ತದೆಂಬ ಅರಿಮೆಯೂ ನನ್ನನ್ನು ಕಾಡಿಸಿತು.ಆಗ ನನ್ನ ಏಕಾಂಗಿತನ ದೂರವಾಗಿಸಲು ನಾನು ಕಂಡುಕೊಂಡ ಉಪಾಯವೇ ಕನ್ನಡ ಹಾಡುಗಳನ್ನು ಕೇಳುವುದು.ಅದರಲ್ಲೂ ಡಾ.ರಾಜಕುಮಾರ್ ರವರ ಹಾಡುಗಳನ್ನು ಕೇಳುವುದು ಒಂದು ಹವ್ಯಾಸವೇ ಆಗಿ ಹೋಯಿತು.ಇದರಿಂದ ನನ್ನನ್ನು ಕಾಡುತ್ತಿದ್ದ ಏಕಾಂಗಿತನ ಕ್ರಮೇಣ ಮರೆಯಾಗಿ ನಾನು ಓದಿನ ಕಡೆ ಗಮನ ಹರಿಸಲಾರಂಭಿಸಿದೆ.ಮೂರು ವರ್ಷ ಕಳೆದಿರುವ ನಾನು ನನ್ನ ಮಾಸ್ಟರ್ ಡಿಗ್ರಿಯನ್ನು ಮುಗಿಸಿರುವುದಲ್ಲದೇ ಹೋಬರ್ಟ್ ನಲ್ಲೇ ಕೆಲಸ ಮಾಡುತ್ತಿದ್ದೇನೆ.ಅಲ್ಲದೆ ಈಗ ಇಲ್ಲಿ ಸಾಕಷ್ಟು ಜನ ಭಾರತೀಯರು ಬಂದಿರುವುದಲ್ಲದೇ ಸುಮಾರು ಹತ್ತು ಹದಿನೈದು ಜನ ಕನ್ನಡಿಗರೂ ಇಲ್ಲಿದ್ದೇವೆ.ಈಗ ನಮಗೆ ಮುಂಚಿನ ಸಮಸ್ಯೆಗಳೇನು ಇಲ್ಲ.

ಎರಡು ವರ್ಷಗಳ ಹಿಂದೆ ಒಂದು ದಿನ ನನ್ನ ಸ್ನೇಹಿತ ಲಂಡನ್ ನಿಂದ ಫೋನ್ ಮಾಡಿ ರಾಜ್ ಕುಮಾರ್ ತೀರಿಕೊಂಡರೆಂಬ ವಿಷಯ ತಿಳಿಸಿದ.ರಾಜ್ ಕುಮಾರ್ ರವರು ಅನಾರೋಗ್ಯದಿಂದ ನರಳುತ್ತಿದ್ದುದರಿಂದ ಅವರ ನಿಧನ ತೀರಾ ಅನಿರೀಕ್ಷಿತವಲ್ಲದಿದ್ದರೂ ನನಗೆ ಒಂದು ರೀತಿ ಅಘಾತಕಾರಿಯಾಗಿತ್ತು.ತಕ್ಷಣ ನಾನು ಬೆಂಗಳೂರಿಗೆ ನನ್ನ ತಂದೆಗೆ ಫೋನ್ ಮಾಡಿ ವಿಚಾರಿಸಿದೆ.ಅವರು ಡಾ.ರಾಜ್ ರವರ ನಿಧನವನ್ನು ಖಚಿತಪಡಿಸಿದರು.ಆ ದಿನವೆಲ್ಲ ತಳಮಳದಿಂದ ಒದ್ದಾಡಿದೆ.

ಡಾ.ರಾಜ್ ರವರು ನನಗೇನು ಬಂಧುವಲ್ಲ ಬಳಗವಲ್ಲ.ಹೋಗಲಿ ನನ್ನ ವಯಸ್ಸಿನವರಂತೂ ಅಲ್ಲವೇ ಅಲ್ಲ.ನಾನು ಅವರ ಅಂಧ ಅಭಿಮಾನಿಯೂ ಆಗಿರಲಿಲ್ಲ.ಅವರ ನಂತರ ನಾನು ಮೂರನೇ ತಲಮಾರಿನವನು.ಆದರೂ ನನ್ನನ್ನು ಏಕೆ ಇವರು ಹೀಗೆ ಕಾಡುತ್ತಾರೆ ಎಂದು ಯೋಚಿಸಿದೆ.ಕೇವಲ ನನಗೊಬ್ಬನಿಗೇ ಅಲ್ಲ ನಾಡಿನಾದ್ಯಂತ ಎಲ್ಲಾ ವಯಸ್ಸಿನವರಿಗೆ,ಕಿರಿಯರು,ಹಿರಿಯರಿಗೆ,ವಿದ್ಯಾವಂತರೂ ಅವಿದ್ಯಾವಂತರಿಗೆ,ಬಡವರಿಗೆ ಶ್ರೀಮಂತರಿಗೆ ರೈತರಿಗೆ,ವ್ಯಾಪಾರಿಗಳಿಗೆ,ಮುಖ್ಯವಾಗಿ ಹೋಟಲಿನ ಕಾರ್ಮಿಕರಿಗೆ ಎಲ್ಲರೂ ಒಂದಲ್ಲ ಒಂದು ರೀತಿ ತಮ್ಮ ನೋವಿಗೆ,ದುಗುಡಕ್ಕೆ ರಾಜ್ ಕುಮಾರ್ ರವರ ಚಿತ್ರಗಳಲ್ಲಿ ಸಮಾಧಾನವನ್ನು ಕಾಣುತ್ತಿದ್ದರು.ನೆಮ್ಮದಿಯನ್ನು ಪಡೆಯುತ್ತಿದ್ದರು.ಬರಿ ನಟರಾಗಿ ಅಷ್ಟೆ ಅಲ್ಲ.ಬದುಕಿನಲ್ಲು ಅವರು ಹಾಕಿಕೊಟ್ಟ ಮೇಲ್ಪಂಕ್ತಿ ಅಸದೃಶವಾಗಿತ್ತು.ಅವರ ನಯವಾದ ನಡವಳಿಕೆ,ಹಿರಿಯರಿಗೆ ಕೊಡುತ್ತಿದ್ದ ಗೌರವ,ತಮ್ಮ ಬದುಕಿನ ರೀತಿಯಿಂದಲೇ ಕನ್ನಡ ನಾಡಿನಲ್ಲಿ ಅವರು ಮೇರು ಪರ್ವತವಾಗಿದ್ದರು.

ನನಗೆ ಡಾ.ರಾಜ್ ರವರ ಮೇಲಿನ ಅಭಿಮಾನ ಬಹುಶಃ ನಾನು ನಮ್ಮಮ್ಮನ ಹೊಟ್ಟೆಯಲ್ಲಿದ್ದಾಗಿನಿಂದಲೇ ಬಂದಿರಬೇಕು.ಕಾರಣ 1982 ರ ಪ್ರಾರಂಭದಲ್ಲಿರಬೇಕು.ಬೆಂಗಳೂರಿನ ಅಭಿನಯ್ ಚಿತ್ರ ಮಂದಿರದಲ್ಲಿ "ಕವಿರತ್ನ ಕಾಳಿದಾಸ" ಚಿತ್ರವನ್ನು ನನ್ನ ತಾಯಿ ಮತ್ತು ತಂದೆ ನೋಡಿದರಂತೆ.ನಾನು ದೊಡ್ಡವನಾದ ಮೇಲೆ ಮತ್ತೆ ನಾನು ಆ ಚಿತ್ರವನ್ನು ನೋಡಿದೆ.ಆ ಚಿತ್ರದಲ್ಲಿನ ಡಾ.ರಾಜ್ ರವರ ಸೊಗಸಾದ ಅಭಿನಯ,ಅವರ ಕಂಠದಿಂದ ಬಂದ ಸುಮಧುರ ಹಾಡುಗಳು ನನ್ನಲ್ಲಿ ಅಭಿಮನ್ಯುವಿಗಾದಂತೆ ಪ್ರಭಾವವನ್ನು ಬೀರಿರಬೇಕು.

ಹೀಗಾಗಿ ಡಾ.ರಾಜ್ ರವರ ನೆನಪು ನನ್ನನ್ನು ಕಾಡುತ್ತಿದ್ದುದು ಅಷ್ಟೇ ಅಲ್ಲ.ನಾನು ದೂರ ದೇಶದಲ್ಲಿದ್ದಾಗ ಸರಿಯಾದ ಸಮಯದಲ್ಲಿ ಅವರು ನನ್ನನ್ನು ಕಾಪಾಡಿದರು.

ಹೀಗೆ ಡಾ.ರಾಜ್ ರವರ ನೆನಪಿನ ನೋವನ್ನು ಅನುಭವಿಸುತ್ತಿದ್ದಾಗಲೇ ನಾನು ಚಿಕ್ಕ ವಯಸ್ಸಿನವನಾಗಿದ್ದಾಗ ಡಾ.ರಾಜ್ ರವರನ್ನು ಅನಿರೀಕ್ಷಿತವಾಗಿ ಭೇಟಿ ಮಾಡಿದ ಪ್ರಸಂಗ ನೆನಪಿಗೆ ಬಂತು.

ಸುಮಾರು 15 ವರ್ಷಗಳ ಹಿಂದಿನ ಮಾತು.ನಾನು 10 ವಯಸ್ಸಿನವನಾಗಿದ್ದಾಗ ನನ್ನ ತಂದೆ ತಾಯಿ ಹಾಗು ನಮ್ಮ ಕುಟುಂಬದ ಇತರರ ಜೊತೆಯಲ್ಲಿ ಪ್ರವಾಸ ಹೊರಟಿದ್ದೆವು.ತಿಪಟೂರು ದಾಟಿ ಹಾಸನಕ್ಕೆ ಮೆಟಡಾರ್ ವಾಹನದಲ್ಲಿ ಹೋಗುತ್ತಿದ್ದೆವು.ಅರ್ಧದಾರಿ ಕ್ರಮಿಸಿದ್ದಾಗ ಇದ್ದಕ್ಕಿದ್ದಂತೆ ನಮ್ಮ ಡ್ರೈವರ್ ರಾಜ್ ಕುಮಾರ್,ರಾಜ್ ಕುಮಾರ್ ಎಂದು ಕೂಗಿಕೊಂಡು ಸ್ವಲ್ಪ ದೂರದ ನಂತರ ವಾಹನವನ್ನು ನಿಲ್ಲಿಸಿದ. ನಾವು ಗಾಬರಿಯಾಗಿ ಕೆಳಗಿಳಿದು ನೋಡಿದೆವು.ಸ್ವಲ್ಪ ದೂರದ ಹಿಂದೆ ಒಂದು ಕಾರು ನಿಂತಿತ್ತು.ಡಾ.ರಾಜ್ ರವರು ಕಾರನ್ನು ಹತ್ತುತ್ತಿದ್ದರು.ಕೆಳಗಡೆ ಪಾರ್ವತಮ್ಮನವರು,ಅವರ ಮಗ ರಾಘವೇಂದ್ರ ಜೊತೆಯಲ್ಲಿ ಇನ್ನೊಬ್ಬರು ನಿಂತಿದ್ದರು.ಜೊತೆಯಲ್ಲಿದ್ದವರು ತಿಪಟೂರಿನ ರಾಮಸ್ವಾಮಿಯವರೆಂದು ನಂತರ ತಿಳಿಯಿತು.ರಾಮಸ್ವಾಮಿಯವರು "ಗಾಬರಿಯಾಗ ಬೇಡಿ,ರಾಜ್ ಕುಮಾರ್ ಕೆಳಗಿಳಿದು ಬರುತ್ತಾರೆ.ಅವರನ್ನು ಮಾತಾಡಿಸುವರಂತೆ"ಎಂದು ಹೇಳಿದರು.ಅವರು ಆ ರೀತಿ ಹೇಳುತ್ತಿದ್ದಂತೆ ಡಾ.ರಾಜ್ ರವರು ಮೆಲ್ಲನೆ ಕಾರಿನಿಂದ ಇಳಿದು ಬಂದು ಎಲ್ಲರನ್ನು ನಗುನಗುತ್ತ ಮಾತಾಡಿಸಿದರು.ನನಗಂತೂ ಸಂಭ್ರಮವೋ ಸಂಭ್ರಮ.ನಮ್ಮ ಚಿಕ್ಕಮ್ಮನವರಂತೂ ಭಾವುಕರಾಗಿ ಜೋರಾಗಿ ಅಳುತ್ತಾ ಕಣ್ಣಿನಲ್ಲಿ ನೀರು ಸುರಿಸುತ್ತಲೇ ಡಾ.ರಾಜ್ ರವರನ್ನು ಮಾತಾಡಿಸುತ್ತಿದ್ದರು.ಅಷ್ಟರಲ್ಲಿ ನಮ್ಮ ತಂದೆಯವರು ಡಾ.ರಾಜ್ ರವರ ಜೊತೆಯಲ್ಲಿ ನಮ್ಮನು ನಿಲ್ಲಿಸಿ ಎರಡು ಫೋಟೊಗಳನ್ನು ತೆಗೆದರು.ಡಾ.ರಾಜ್ ರವರಲ್ಲದೇ ಜೊತೆಯಲ್ಲಿದ್ದ ಪಾರ್ವತಮ್ಮನವರು ಹಾಗು ರಾಘವೇಂದ್ರರವರೂ ಸಹ ನಮ್ಮ ಜೊತೆಯಲ್ಲಿ ನಗುನಗುತ್ತ ಮಾತಾಡಿ ನಮ್ಮ ಪ್ರವಾಸದ ಬಗ್ಗೆ ಕೇಳಿ ತಿಳಿದುಕೊಂಡರು.ಡಾ.ರಾಜ್ ರವರ ಕುಟುಂಬದ ಸೌಜನ್ಯ,ಸರಳ ನಡವಳಿಕೆ ನಮಗೆಲ್ಲ ತುಂಬಾ ಮೆಚ್ಚುಗೆಯಾಯಿತು. ನಮ್ಮಂತ ಒಂದು ಸಾಮಾನ್ಯ ಕುಟುಂಬದೊಂದಿಗೂ ಆತ್ಮೀಯತೆಯಿಂದ ನಡೆದುಕೊಳ್ಳುವ ಡಾ.ರಾಜ್ ರವರು ಜನ ಸಾಮಾನ್ಯರಿಗೆ ಅಣ್ನನಾಗಿ,ಇಡೀ ಕನ್ನಡ ನಾಡಿನ ಆರಾಧ್ಯ ದೈವ ಆಗಿಧ್ಧುದರಲ್ಲಿ ಆಶ್ಛರ್ಯವೇನಿದೆ.ಈ ಒಂದು ಸವಿ ನೆನಪು ಯಾವಾಗಲೂ ನನ್ನ ಜೊತೆಯಲ್ಲಿರುತ್ತದೆ.

ಕಳೆದ ಜನವರಿಯಲ್ಲಿ ನಾನು ಬೆಂಗಳೂರಿಗೆ ಬಂದಿದ್ದೆ.ಬೆಂಗಳೂರಿಗೆ ಬಂದ ತಕ್ಷಣ ನನ್ನ ಮೊದಲ ಕಾರ್ಯಕ್ರಮವೇ ಡಾ.ರಾಜ್ ರವರ ಸಮಾಧಿಯ ದರ್ಶನ ಮಾಡುವುದು.ನನ್ನ ಸೋದರತ್ತೆಯ ಮಗ ಸುದೀಂಧ್ರನ ಜೊತೆ ಅಲ್ಲಿಗೆ ಹೋಗಿದ್ದಾಗ ಜನ ಜಾತ್ರೆಯೇ ಸೇರಿತ್ತು.ದೇವರಿಗೆ ಪೂಜೆ ಮಾಡುವ ರೀತಿಯಲ್ಲಿ ಹಣ್ಣು ಹೂವಿನೊಂದಿಗೆ ಡಾ.ರಾಜ್ ರವರ ಸಮಾಧಿಗೆ,ಭಾವಚಿತ್ರಕ್ಕೆ ನಮಿಸುತ್ತಿದ್ದರು.ನಾನು ಈ ಧೃಶ್ಯಗಳನ್ನು ನೋಡಿ ಭಾವುಕನಾಗಿ ಬಿಟ್ಟಿದ್ದೆ.ಕೆಲವರಂತೂ ಉತ್ತರ ಕರ್ನಾಟಕದ ದೂರದ ಊರಿನಿಂದ ಬಂದಿದ್ದರು.ಒಂದು ಅಜ್ಜಿ ತನ್ನ ಮೊಮ್ಮಗನ ಜೊತೆಯಲ್ಲಿ ಬಸವನ ಬಾಗೇವಾಡಿಯಿಂದ ಬಂದಿತ್ತಂತೆ.ಖರ್ಚಿಗೆಂದು ತನ್ನ ಚಿನ್ನದ ಮೂಗುತಿಯನ್ನು ಮಾರಿಕೊಂಡು ಬಂದಿದ್ದ ಆ ಮುದುಕಿಗೂ ಡಾ.ರಾಜ್ ರವರಿಗೂ ಯಾವ ಜನಮದ ಋಣಾನುಬಂಧ.

ಡಾ.ರಾಜ್ ರವರು ಕನ್ನಡ ನಾಡಿಗೆ ಏನು ಮಾಡಿದ್ದಾರೆಂದು ಕೆಲವರು ಬುದ್ಧಿವಂತರು ಸಿನಿಕತನದಿಂದ ಮಾತಾಡುವುದನ್ನು ನಾವು ಕೇಳಿದ್ದೇವೆ.ಡಾ.ರಾಜ್ ರವರು ಸ್ಠಾವರ ರೂಪದಲ್ಲಿ ಏನೂ ಮಾಡಿಲ್ಲದೇ ಇರಬಹುದು.ರಾಜ್ ಕುಮಾರ್ ರವರ ಚಿತ್ರಗಳು ಲಕ್ಷಾಂತರ ಜನಗಳಿಗೆ ನೆಮ್ಮದಿಯನ್ನೂ,ಮನಸ್ಸಿಗೆ ಸಮಾಧಾನವನ್ನೂ ನೀಡಿವೆ.ಬಂಗಾರದ ಮನುಷ್ಯ ನೋಡಿ ಎಷ್ಟು ಜನ ರೈತರು ಬದಲಾವಣೆ ಹೊಂದಲಿಲ್ಲ?. ಹುಟ್ಟಿದರೇ ಕನ್ನಡ ನಾಡಲಿ ಹುಟ್ಟಬೇಕು ಎನ್ನುವ ಹಾಡು ಇಂದಿಗೂ ಜನಗಳನ್ನು ರೋಮಾಂಚನಗೊಳಿಸುತ್ತದೆ.ಬರ ಪರಿಹಾರ ನಿಧಿ,ಗೋಕಾಕ್ ಚಳುವಳಿ,ಚಿತ್ರರಂಗದ ಅನೇಕ ಸಮಸ್ಯೆಗಳು ಇವಕ್ಕೆಲ್ಲಾ ಡಾ.ರಾಜ್ ರವರ ನಾಯಕತ್ವವನ್ನು ನಾವು ಪಡೆದುಕೊಳ್ಳಲಿಲ್ಲವೇ?ಜಂಗಮರಂತೆ ಇದೀ ನಾಡನ್ನು ಸುತ್ತಿ ಕನ್ನಡ ಭಾಷೆ,ಕನ್ನಡ ನುಡಿಗಾಗಿ ತಮ್ಮ ಬೆವರನ್ನು ಹರಿಸಲಿಲ್ಲವೇ?

ಬಸವನ ಬಾಗೇವಾಡಿಯ ಆ ಹಣ್ಣು ಹಣ್ಣು ಮುದುಕಿ ತನ್ನ ಮೂಗುತಿಯನ್ನು ಮಾರಿ ಡಾ.ರಾಜ್ ರವರ ಸಮಾಧಿಯ ದರ್ಶನ ಮಾಡಿದ ಆಕೆಯ ಜೀವನದಲ್ಲಿ ಎಲ್ಲೋ ಒಂದು ಕಡೆ ನೆಮ್ಮದಿಯ ಭಾವ ಕಾಣ ಬಹುದಲ್ಲವೇ.ವಿದೇಶದಲ್ಲಿ ಒಂಟಿತನದಿಂದ ಒದ್ದಾಡುತ್ತಿದ್ದ ನನ್ನಂಥ ಎಷ್ಟೋ ಜನರನ್ನು ಕೀಳರಿಮೆಯಿಂದ ಮುಕ್ತಿಗೊಳಿಸಿಲ್ಲವೇ.

ಕಾಣದ ಆ ದ್ವೀಪದಲ್ಲಿ ಒಂಟಿತನವೆಂಬ ಕಗ್ಗತ್ತಲ ನಡುವೆ ಕುಳಿತಿದ್ದ ನನಗೆ ಒಂದು ದೀಪವಾಗಿ ನನ್ನಲ್ಲಿ ಆಶಾ ಕಿರಣ ಮೂಡಿಸಿದ್ದು ಡಾ.ರಾಜ್.

ಅದೇ ರೀತಿ ಲಕ್ಷ ಲಕ್ಷ ಕನ್ನಡಿಗರ ಮನದ ಕಗ್ಗತ್ತಲಲ್ಲಿ ಒಂದು ಸಣ್ಣ ಬೆಳಕಾಗಿ,ದಾರಿ ದೀಪವಾಗಿ ಬಂದದ್ದು ಡಾ.ರಾಜ್

ಇಡೀ ನಾಡಿನ ಜನರನ್ನು ಮಂತ್ರ ಮುಗ್ಧಗೊಳಿಸಿದ ಆ ಮಾಂತ್ರಿಕನನ್ನು ಕಳೆದುಕೊಂಡಿದ್ದಕ್ಕೆ ಬೆಲೆ ಕಟ್ಟಲಾದೀತೆ.

ನಮ್ಮೆಲ್ಲರನ್ನೂ ಅನಾಥರನ್ನಾಗಿ ಮಾಡಿ ಹೋದ ಆ ಅಣ್ಣನನ್ನು ಮತ್ತೆ ನಾವು ಪಡೆಯಲಾದೀತೆ.

ಮಲಿನವಿರದ ನಗೆಯ ಮೊಗದ

ಚೊಕ್ಕ ಬಿಳಿಯ ಮಲ್ಲಿಗೆ

ಕಣ್ನ ನೀರ ಒರೆಸಿದಂತ ಕೈಗಳೇ

ನೀವು ಹೋದಿರೆಲ್ಲಿಗೆ?

ಎಲ್ಲಿ ಹೋದ ಆ ಅಲ್ಲಮ?

ಎಲ್ಲಿ ಹೋದ ಆ ಜಂಗಮ?
ಎಚ್.ಎಸ್.ಕೃಷ್ಣಪ್ರಸಾದ್
ಹೋಬರ್ಟ್,ಆಸ್ತ್ರೇಲಿಯ
www.kris.prd@gmail.com
Phone::0061432213070
ನನ್ನ ಸ್ಥಳೀಯ ವಿಳಾಸ
ಎಚ್.ಎಸ್.ಕೃಷ್ಣಪ್ರಸಾದ್
ಮನೆ ಸಂಖ್ಯೆ::253/ಎ
2ನೇ ಬಿ ಮುಖ್ಯ ರಸ್ತೆ.
1 ನೇ ಹಂತ,ಗಿರಿನಗರ,ಬೆಂಗಳೂರು-560085
ಸಂಪಾದಕರು
ಸುಧಾ ವಾರ ಪತ್ರಿಕೆ
"ಡೆಕ್ಕನ್ ಹೆರಾಲ್ಡ್ ಪ್ರೆಸ್"
ಎಂ.ಜಿ.ರಸ್ತೆ,ಬೆಂಗಳೂರು
ಮಾನ್ಯರೇ,
ವಿಷಯ::ನನ್ನ ಲೇಖನವನ್ನು ತಮ್ಮ ವಾರ ಪತ್ರಿಕೆಯಲ್ಲಿ ಪ್ರಕಟಿಸಲು ಕೋರಿ
ನಾನು ಆಸ್ತ್ರೇಲಿಯಾದ ಹೋಬರ್ಟ್ ನಲ್ಲಿ ಕಳೆದ ಮೂರು ವರ್ಷದಿಂದ ವಾಸವಾಗಿದ್ದು,ಕಳೆದ ಜನವರಿಯಲ್ಲಿ ಬೆಂಗಳೂರಿಗೆ ಬಂದಿದ್ದಾಗ ಡಾ.ರಾಜ್ ಕುಮಾರ್ ರವರ ಸಮಾಧಿಗೆ ಭೇಟಿ ನೀದಿದಾಗ ಆದ ನನ್ನ ಅನುಭವ,ಅನಿಸಿಕೆಗಳನ್ನು ಅಕ್ಷರ ರೂಪದಲ್ಲಿ ನನಗೆ ತೋಚಿದ ಮಟ್ಟಿಗೆ ಒಟ್ಟುಗೂಡಿಸಿದ್ದೇನೆ,ದಯವಿಟ್ಟು ನಮ್ಮ ಸುಧಾ ವಾರ ಪತ್ರಿಕೆಯಲ್ಲಿ "ನೆನಪು" ಶೀರ್ಷಿಕೆಯಡಿಯಲ್ಲಿ ಪ್ರಕಟಿಸಬೇಕೆಂದು ಕೇಳಿಕೊಳ್ಳುತ್ತೇನೆ.ನನ್ನ ಲೇಖನದ ಜೊತೆಯಲ್ಲಿ ನಾನು ಚಿಕ್ಕ ಹುಡುಗನಾಗಿದ್ದಾಗ ರಾಜ್ ಕುಮಾರ್ ರವರನ್ನು ಭೇಟಿಯಾದ ಸಂದರ್ಭದ ಫೋಟೋವನ್ನು ಸಹ ಕಳಿಸುತ್ತಿದ್ದೇನೆ.ದಯವಿಟ್ಟು ನನ್ನ ಲೇಖನದ ಜೊತೆಯಲ್ಲಿ ಫೋಟೋವನ್ನು ಸಹ ಪ್ರಕಟಿಸಬೇಕೆಂದು ಕೇಳಿಕೊಳ್ಳುತ್ತೇನೆ.
ಇಂತಿ,ಗೌರವಪೂರ್ವಕವಾಗಿ ತಮ್ಮ ವಿಶ್ವಾಸಿ

(ಎಚ್.ಎಸ್.ಕೃಷ್ಣಪ್ರಸಾದ್}


1 comment:

Maanasa Sarovara said...

Dear Prakash,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends.