Wednesday, October 08, 2008

ಒಂದು ತೀರ್ಥ ಪ್ರಸಂಗ

"ಓಂದು ತೀರ್ಥ ಪ್ರಸಂಗ"

ಅದೊಂದು ತಾಲ್ಲೂಕು ಮುಖ್ಯ ಕೇಂದ್ರ.ಆ ಊರಿನಲ್ಲೊಂದು ಪ್ರಸಿದ್ಧವಾದ ದೇವಸ್ಥಾನ.ಊರಿನ ಎಲ್ಲಾ ಮತಸ್ತರು ಹಾಗು ಹತ್ತೂ ಸಮಸ್ತರು ಅಲ್ಲದೆ ಸುತ್ತಮುತ್ತಲಿನ ಊರುಗಳ ಜನಗಳೂ ಸಹಿತ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದ ಪ್ರಭಾವಿ ದೇವರು.ವರ್ಷದ ಎಲ್ಲಾ ಕಾಲದಲ್ಲು ಜನ ಜಂಗುಳಿಯಿಂದ ತುಂಬಿರುತ್ತಿತ್ತು.ಆ ದೇವಸ್ಥಾನದ ಅರ್ಚಕರೂ ಸಹ ಶ್ರದ್ಧೆ ಭಕ್ತಿಗಲಿಂದ ಪೂಜೆ ಸಲ್ಲಿಸುತ್ತಾ ಭಕ್ತ ಜನಗಳ ಪ್ರೀತಿ ಗೌರವಗಳಿಗೆ ಪಾತ್ರರಾಗಿದ್ದರು.

ಹೀಗೆ ಒಂದು ದಿನ ಸಂಜೆ ಇನ್ನೇನು ದೇವಸ್ಥಾನದ ಬಾಗಿಲು ಹಾಕಬೇಕು ಎನ್ನುವ ಸಮಯಕ್ಕೆ ಸರಿಯಾಗಿ ಆ ಊರಿನ ಒಬ್ಬ ಸ್ಥಳೀಯ ನಾಯಕರು ತಮ್ಮ ಕುಟುಂಬದೊಂದಿಗೆ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಕೊಡಲು ಹೇಳಿದರು.ಅಲ್ಲದೆ ಲೋಕಾಭಿರಾಮವಾಗಿ ಅರ್ಚಕರ ಕ್ಷೇಮ ಸಮಾಚಾರ ವಿಚಾರಿಸಿದುದಲ್ಲದೆ ಆ ಊರಿನ ರಾಜಕೀಯ,ಮಳೆ ಬೆಳೆ ಎಲ್ಲಾ ವಿಷಯವನ್ನೂ ಚರ್ಚಿಸಿದ್ದಲ್ಲದೆ ರಾಜ್ಯದ ಮಂತ್ರಿಗಳ ಜತೆ ತಮಗಿರುವ ಸಂಪರ್ಕ ಹಾಗು ಪ್ರಭಾವಗಳಬಗ್ಗೆಯೂ ದೊಡ್ಡಸ್ತಿಕೆಯಿಂದ ಹೇಳಿಕೊಂಡರು.

ನಿರ್ವಾಹವಿಲ್ಲದೆ ಅರ್ಚಕರು ಸಾವಧಾನದಿಂದ ಕೇಳುತ್ತಾ ತಾವು ಸಹಿತ ದೇವಸ್ಥಾನಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಮಾತನಾಡಿ ನಂತರ ದೇವರಿಗೆ ಪೂಜೆ ಮಾಡಿ ಮಂಗಳಾರತಿ ಹಾಗು ತೀರ್ಥವನ್ನು ನಾಯಕರಿಗೆ ಹಾಗು ಅವರ ಕುಟುಂಬಕ್ಕೆ ನೀಡಿದರು.

ಅದೇ ಸಮಯದಲ್ಲಿ ದೇವಸ್ಥಾನಕ್ಕೆ ಬಂದಿದ್ದ ಕೆಲವು ಇತರ ಭಕ್ತಾದಿಗಳು ಹಾಗು ಒಬ್ಬ ವೃದ್ಧ ಯಜಮಾನರಿಗೂ ಮಂಗಳಾರತಿ ಹಾಗು ತೀರ್ಥವನ್ನು ಕೊಟ್ಟರು.

ಅಲ್ಲಿವರೆಗೆ ನಗುನಗುತ್ತಾ ಮಾತಾಡುತ್ತಿದ್ದ ನಮ್ಮ ನಾಯಕರು ಇದ್ದಕ್ಕಿದ್ದಂತೆ ಅರ್ಚಕರೆ ಮೇಲೆ ಕೂಗಾಡಲು ಪ್ರಾರಂಭಿಸಿದರು.ಅಲ್ಲಿ ಸೇರಿದ್ದ ಭಕ್ತ ಜನ ಹಾಗು ಅರ್ಚಕರು ಏನೂ ತೋಚದೆ ಗಾಬರಿಯಾಗಿ ನಿಂತು ಬಿಟ್ಟರು.ಅರ್ಚಕರು ಸಮಾಧಾನದಿಂದ ಅವರ ಕೋಪಕ್ಕೆ ಏನು ಕಾರಣ ಎಂದು ಕೇಳಿದಾಗ ಆ ನಾಯಕರು ಮತ್ತಷ್ಟು ವ್ಯಗ್ರರಾಗಿ "ಅಲ್ಲಾ ಸ್ವಾಮಿ,ತಾವು ಇಂಥಾ ಕೆಲಸ ಮಾಡಬಹುದಾ? ಅದೂ ದೇವರ ಎದುರಿನಲ್ಲಿ ಇಂಥಾ ಅನ್ಯಾಯ ಮಾಡಬಹುದಾ"ಎಂದು ಅಬ್ಬರಿಸಿದಾಗ ಅರ್ಚಕರು ಅರ್ಠವಾಗದೆ ಕಣ್ಣು ಕಣ್ಣು ಬಿಡುತ್ತಾ ಸುಮ್ಮನೆ ನಿಂತಿದ್ದರು.ಮತ್ತೆ ನಾಯಕರು ಮುಂದುವರಿಸುತ್ತಾ ಅಲ್ಲಿದ್ದ ಜನಗಳಿಗೆ ನ್ಯಾಯ ಒಪ್ಪಿಸಲು ಶುರು ಮಾಡಿದರು."ನೀವೆ ಹೇಳ್ರಪ್ಪ,ಈ ಅಯ್ನೋರು ಒಬ್ರಿಗೊಂದು ಒಬ್ರಿಗೊಂದು ಮಾಡ್ಬೌದಾ?ನೀವೆ ಹೇಳಿ ನ್ಯಾಯಾನಾ.ನಮಗೆಲ್ರಿಗೂ ಒಂದು ಕಿತ ತೀರ್ಥ ನೀಡಿ ,ಅವರ ಕಡೆಯೋರು ಅಂಥ ಈ ಯಜಮಾನ್ರಿಗೆ ಮೂರು ಕಿತ ತೀರ್ಥ ನೀಡವ್ರಲ್ಲಾ.ಇದು ಧರ್ಮಾನ ನೀವೆ ಹೇಳಿ ಎಂದು ಅಲ್ಲಿದ್ದ ಭಕ್ತಾದಿಗಳ ಬಳಿ ನ್ಯಾಯ ಒಪ್ಪಿಸಿದರು.

ಆಗ ತಕ್ಷಣ ಅರ್ಚಕರಿಗೆ ತಾವು ಮಾಡಿದ ಪ್ರಮಾದದ ಅರಿವು ಆಯಿತು.ಹಣೆ ಮೇಲಿದ್ದ ಬೆವರನ್ನು ಶಲ್ಯದಿಂದ ಒರೆಸಿಕೊಳ್ಳುತ್ತಾ ಏನೂ ತೋಚದೆ ನಿಂತಿದ್ದರು.ಸ್ಥಳೀಯವಾಗಿ ಪ್ರಭಾವಶಾಲಿಯಾಗಿದ್ದ ಈ ವ್ಯಕ್ತಿಯನ್ನು ಎದುರು ಹಾಕಿಕೊಳ್ಲುವಂತಿರಲಿಲ್ಲ.ಯಾವ ಸಮಯದಲ್ಲಿ ಏನು ಕೆಲಸ ಕಾರ್ಯಗಳಿಗೆ ಈ ವ್ಯಕ್ತಿಯನ್ನು ಆಶ್ರಯಿಸಬೇಕಾಗಬಹುದೋ ಏನೋ,ಇದೇ ವಿಷಯವನ್ನು ದೊಡ್ಡದು ಮಾಡಿ ಊರಲ್ಲೆಲ್ಲಾ ಪ್ರಚಾರ ಮಾಡಿ ನನ್ನನ್ನು ಸಣ್ಣವನನ್ನಾಗಿ ಮಾಡಿಬಿಡಬಹುದು ಎಂದೆಲ್ಲಾ ಯೋಚಿಸುತ್ತಾ ದೇವರ ಮೇಲೆ ಭಾರ ಹಾಕುತ್ತಾ ಯೋಚಿಸುತ್ತಿದ್ದರು.ತಕ್ಷಣ ಮಿಂಚಿನಂತೆ ಅವರಿಗೆ ಒಂದು ಉಪಾಯ ಹೊಳೆದು ನಸು ನಗುತ್ತಾ "ಅಲ್ಲಾ ಸ್ವಾಮಿ,ಇಷ್ಟು ಸಣ್ಣ ವಿಷಯಕ್ಕೆ ಕೋಪ ಮಾಡಿಕೊಂಡು ಕೂಗಾಡಿದರೆ ಹ್ಯಾಗೆ"ಎಂದು ಸಮಾಧಾನ ಮಾಡಲು ಹೋದರು.
"ಅಂದರೆ ನೀವು ಮಾಡಿದ್ದು ಸರೀನಾ ಹಾಗಾದರೆ" ಎಂದು ಅರ್ಚಕರ ಮೇಲೆ ಎರಗಿದರು ನಮ್ಮ ಕೋಪೋದ್ರಿಕ್ತ ನಾಯಕರು.ಜನಗಳ ಮುಂದೆ ಅದರಲ್ಲು ತಮ್ಮ ಹೆಂಡತಿ ಮಕ್ಕಳ ಮುಂದೆ ತಮಗೆ ಅವಮಾನ ಆಯ್ತೆಂದು ಕುದಿಯುತ್ತಿದ್ದರು.

ಮತ್ತೆ ಅರ್ಚಕರು ಸಮಾಧಾನದಿಂದ"ಅಲ್ಲಾ ಸ್ವಾಮಿ,ಆ ಯಜಮಾನರಿಗೆ ಹೆಂಡತಿ ಇಲ್ಲ.ಹೆಂಡತಿ ಇಲ್ಲದವರಿಗೆ ಮೂರು ಸರ್ತಿ ತೀರ್ಥಕೊಡುವುದು ವಾಡಿಕೆ .ಅದಕ್ಕೆ ಅವರಿಗೆ ಮೂರು ಸಲ ತೀರ್ಥ ಕೊಟ್ಟೆ.ನಿಮಗೆ ಒಂದು ಸಲ ಕೊಟ್ಟೆ.ಬೇಕಿದ್ದರೆ ಹೇಳಿ.ನಿಮಗೂ ಮೂರು ಸಲ ತೀರ್ಥ ಕೊಡ್ತೀನಿ"ಎಂದರು.

ತಕ್ಷಣ ನಾಯಕರ ಹೆಂಡತಿ ತಮ್ಮ ಗಂಡನ ಮೇಲೆ ರೇಗುತ್ತಾ "ಸುಮ್ಕೆ ನಡೀರಿ ಸಾಕು.ಒಂದು ಕಿತ ತೀರ್ಥ ತಗೊಂಡಿದ್ದು ಸಾಲಲ್ವಾ.ಮೂರು ಕಿತಾನೆ ಬೇಕಾ.ದೇವಸ್ಥಾನಕ್ಕೆ ಬಂದ್ರೂ ಕೂಗಾಡದ ಮಾತ್ರ ನಿಲ್ಲಿಸಬ್ಯಾಡಿ"ಎಂದು ಗಂಡನ ಮೇಲೆ ರೇಗಾಡಿದರು.

ಆ ನಾಯಕರು ಪಾಪ,ಪೆಚ್ಚಾಗಿ ಏನು ಹೇಳುವುದಕ್ಕೂ ತೋಚದೆ ಹೆಗಲ ಮೇಲಿನ ವಲ್ಲಿಯನ್ನ ಸರಿಪಡಿಸಿಕೊಳ್ಳುತ್ತಾ ಹೊರನಡೆದರು.

ಅರ್ಚಕರು "ಸದ್ಯ ಗಂಡಾಂತರ ಬಗೆಹರಿಯಿತಲ್ಲಾ.ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯುಸ್ಸು"ಎಂದುಕೊಂಡು ನಗುತ್ತ ಗರ್ಭಗುಡಿಯೊಳಗೆ ಹೋದರು.
ಹುಳಿಯಾರ್ ಪ್ರಕಾಶ್
ಗಿರಿನಗರ
ದಿನಾಂಕ::08.10.2008
ಬುಧವಾರ

1 comment:

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿದೆ ತೀರ್ಥ ಪ್ರಸಂಗ